ಹಾಸನ: ಸಚಿವ ಯು.ಟಿ.ಖಾದರ್ ಎದುರು ಕಾರ್ಯಕರ್ತರ ಅಸಮಾಧಾನ

Update: 2019-02-25 16:58 GMT

ಹಾಸನ, ಫೆ.25: ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ಥಿತ್ವದಲ್ಲಿದ್ದರೂ ಹಾಸನ ಜಿಲ್ಲೆಯಲ್ಲಿ ಎರಡು ಪಕ್ಷಗಳ ನಡುವೆ ಅಸಮಧಾನ ಇರುವುದು ವ್ಯಕ್ತವಾಗಿದ್ದು, ಸಚಿವ ಯು.ಟಿ.ಖಾದರ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದು, ಪಕ್ಷದ ಮುಖಂಡರು ಮೈಸೂರು ಪೇಟ ತೊಡಿಸಿ ಸ್ವಾಗತಿಸಿದರು. ನಂತರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನೋವನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ನಾರಾಯಣಗೌಡ, ಕಾರ್ಯಕರ್ತ ವಜೀದ್, ತಮ್ಲಾಪುರ ಗಣೇಶ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು, ಜಿಲ್ಲೆಯಲ್ಲಿ ಸಚಿವ ರೇವಣ್ಣ ಮತ್ತು ಜೆಡಿಎಸ್ ಮುಖಂಡರ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿ ಸಚಿವರಿಗೆ ದೂರು ನೀಡಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದರೂ, ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಜಿಲ್ಲೆಯ ಯಾವ ಕಚೇರಿಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಕೆಲಸವಾಗುತ್ತಿಲ್ಲ ಎಂದು ಅಲವತ್ತುಕೊಂಡರು. ಜಿಲ್ಲೆಯ ತಾಪಂ, ಜಿಪಂ, ನಗರಸಭೆಯಲ್ಲೂ ನಮಗೆ ಸ್ಥಾನಮಾನಗಳೇ ಸಿಗುತ್ತಿಲ್ಲ. ಎಲ್ಲದಕ್ಕೂ ಸಚಿವ ರೇವಣ್ಣ ಅವರಿಂದ ಲೆಟರ್ ತರಲು ಹೇಳುತ್ತಾರೆ. ಒಂದು ವೇಳೆ ನಮ್ಮ ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ದಾರಿಯನ್ನು ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ಅವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಾರ್ಯಕರ್ತರು ಮತ್ತು ಮುಖಂಡರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಮೈತ್ರಿ ಸರಕಾರದಲ್ಲಿ ಗೊಂದಲಗಳು ಸಹಜ. ಇವುಗಳನ್ನು ಸರಿಪಡಿಸಿಕೊಂಡು ಹೋಗಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ತಾವು ಅನುಭವಿಸುತ್ತಿರುವ ಅನ್ಯಾಯ ಹಾಗೂ ನೋವುಗಳನ್ನು ತಮ್ಮ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಪ್ರಸನ್ನ, ಜಿಪಂ ಅಧ್ಯಕ್ಷೆ ಶ್ವೇತಾದೇವರಾಜು, ಉಪಾಧ್ಯಕ್ಷ ನಾರಾಯಣಗೌಡ, ಮುಖಂಡರು ಹೆಚ್.ಕೆ. ಜವರೇಗೌಡ, ಎಚ್.ಪಿ. ಮೋಹನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News