23 ಲಕ್ಷ ಅರಣ್ಯವಾಸಿಗಳ ಎತ್ತಂಗಡಿಗೆ ಕೇಂದ್ರ ಸರಕಾರ ಕಾರಣ: ಜೆಡಿಎಸ್ ಮುಖಂಡ ದೇವರಾಜ್ ಆರೋಪ

Update: 2019-02-25 17:27 GMT

ಚಿಕ್ಕಮಗಳೂರು, ಫೆ.25: ದೇಶದ 16 ರಾಜ್ಯಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳೂ ಸೇರಿದಂತೆ ಇತರ ಸಮುದಾಯಗಳ ಜನರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಈ ಆದೇಶದಿಂದಾಗಿ 23 ಲಕ್ಷ ಜನರು ನಿರಾಶ್ರಿತರಾಗಲಿದ್ದಾರೆ. ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹೆಸರಿನಲ್ಲಿ ಎಂಎನ್‍ಸಿ ಕಂಪೆನಿಗಳ ಅಡಿಯಾಳಾಗಿರುವ ಕೆಲ ನಕಲಿ ಪರಿಸರ ಸಂಘಟನೆಗಳು ಹಿಂದಿನ ಯುಪಿಎ ಸರಕಾರ ಜಾರಿ ಮಾಡಿದ್ದ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಸಿಂಧುತ್ವ ಪಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅರಣ್ಯದಲ್ಲಿರುವ ಮೂಲನಿವಾಸಿಗಳನ್ನು ಹೊರ ಹಾಕಲು ಆದೇಶ ನೀಡಿ ಇದಕ್ಕೆ 2019, ಜು.27ರವರೆಗೆ ಗಡುವು ನೀಡಿದೆ. ನ್ಯಾಯಾಲಯ ಇಂತಹ ಆದೇಶ ನೀಡಲು ಕೇಂದ್ರ ಸರಕಾರವೇ ಕಾರಣವಾಗಿದ್ದು, ಅರಣ್ಯವಾಸಿಗಳು ಈ ದೇಶದ ಮೂಲ ನಿವಾಸಿಗಳಾಗಿದ್ದು, ಇಂತಹ ಜನರ ಬದುಕಿನ ಪ್ರಶ್ನೆ ಬಂದಾಗ ಕೇಂದ್ರ ಸರಕಾರ ಯಾವುದೇ ಬೆಲೆ ತೆತ್ತಾದರೂ ಸಮರ್ಥವಾಗಿ ವಕೀಲರ ಮೂಲಕ ವಾದಿಸಬೇಕಿತ್ತು. ಆದರೆ ಕೇಂದ್ರ ಸರಕಾರ ಬಡವರ ಬದುಕಿನ ಹಕ್ಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ನ್ಯಾಯಾಲಯ ಇಂತಹ ಆದೇಶ ನೀಡಿದೆ ಎಂದು ಅವರು ದೂರಿದರು.

ಹಿಂದಿನ ಯುಪಿಎ ಸರಕಾರ ಅರಣ್ಯ ವಾಸಿಗಳನ್ನು ಎತ್ತಂಗಡಿ ಮಾಡುವ ಸಂದರ್ಭ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯನ್ನು ಜಾರಿ ಮಾಡಿ ತಲತಲಾಂತರದಿಂದ ಅರಣ್ಯದಲ್ಲಿಯೇ ವಾಸಿಸಿದ್ದವರ ಬದುಕಿಗೆ ಆಸರೆ ಒದಗಿಸಿದೆ. ಆದರೆ ಕೇಂದ್ರ ಸರಕಾರ ಇಂತಹ ಜನಪರವಾದ ಕಾಯ್ದೆಯನ್ನು ನಿರ್ಲಕ್ಷ್ಯಿಸಿದ ಪರಿಣಾಮ ದೇಶದ ಮೂಲ ನಿವಾಸಿಗಳ ಬದುಕು ಅತಂತ್ರವಾಗುವಂತಾಗಿದೆ ಎಂದ ಅವರು, ಕೇಂದ್ರ ಸರಕಾರಕ್ಕೆ ಇಂತಹ ಜನಪರ ಕಾಯ್ದೆಯ ಬಗ್ಗೆ ಅರಿವು ಇಲ್ಲದಂತೆ ವರ್ತಿಸಿದೆ. ಈ ಕಾಯ್ದೆಯ ಸಮರ್ಪಕ ಅನುಷ್ಠಾನದಿಂದ ಬುಡಕಟ್ಟು ಜನರ ಬದುಕಿಗೆ ಆಸರೆ ಒದಗಿಸಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.

ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರಕಾರದಿಂದ ಮಾತ್ರ ಸಾಧ್ಯವಿದ್ದು, ಎನ್‍ಡಿಎ ಸರಕಾರ ಕೂಡಲೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ತನ್ನ ವಕೀಲರ ಮೂಲಕ ಸಮರ್ಥವಾಗಿ ವಾದ ನಡೆಸುವ ಮೂಲಕ ನಿರಾಶ್ರಿತರಾಗುವ ಬುಡಕಟ್ಟು ಸಮುದಾಯದವರ ನೆರವಿಗೆ ಧಾವಿಸಬೇಕು. ನ್ಯಾಯಾಲಯದ ಈ ಆದೇಶದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಆದಿವಾಸಿ ಕುಟುಂಬಗಳು ಒಕ್ಕಲೇಳಬೇಕಾದ ಭಯದಲ್ಲಿ ಬದುಕುತ್ತಿದ್ದು, ಜಿಲ್ಲೆಯ ಸಂಸದರು ಹಾಗೂ ಬಿಜೆಪಿ ಶಾಸಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಶಾಸಕರು ಹಾಗೂ ಸಂಸದರು ಜಿಲ್ಲೆಯ ಮೂಲನಿವಾಸಿಗಳ ವಿರೋಧಿಗಳಾಗಿದ್ದಾರೆಂದು ಟೀಕಿಸಿದರು.

ನ್ಯಾಯಾಲಯದ ಆದೇಶ ಜಾರಿಯಾದಲ್ಲಿ ದೇಶಾದ್ಯಂತ ಸುಮಾರು 2.50 ಕೋಟಿ ಜನರು ನಿರಾಶ್ರಿತರಾಗಲಿದ್ದಾರೆಂದು ಆತಂಕ ವ್ಯಕ್ತಪಡಿಸಿದ ಅವರು, ಕೇಂದ್ರ ಸರಕಾರ ಈ ಕೂಡಲೇ ಕಾನೂನಿಗೆ ತಿದ್ದುಪಡಿ ತಂದು ಮೂಲನಿವಾಸಿಗಳ ರಕ್ಷಣೆಗೆ ಮುಂದಾಗಬೇಕೆಂದರು. ಕೇಂದ್ರ ಸರಕಾರದ ನಿರ್ಲಕ್ಷದಿಂದಾಗಿ ಇಂತಹ ಆದೇಶ ಹೊರಬೀಳುವಂತಾಗಿದೆ. ಇದಕ್ಕೆ ಕೇಂದ್ರ ಸರಕಾರವೇ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಪ್ಪ, ರಮೇಶ್, ಝಮೀಲ್ ಅಹ್ಮದ್, ಲಕ್ಷ್ಮಣ್, ಜಯರಾಜ್ ಅರಸ್ ಉಪಸ್ಥಿತರಿದ್ದರು.

ದೇಶದ ಬುಡಕಟ್ಟು ಸಚಿವಾಲಯದಿಂದ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, ಅರಣ್ಯಪ್ರದೇಶಗಳಲ್ಲಿ ತಮ್ಮ ಒಡೆತನ ಪ್ರತಿಪಾದಿಸಿ ಒಟ್ಟು 42.49 ಲಕ್ಷ ಬಡಕಟ್ಟು ಜನರು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಅರ್ಜಿ ಸಲ್ಲಿಸಿವೆ. ಆದರೆ ಈ ಪೈಕಿ ಕೇವಲ 18.89 ಲಕ್ಷ ಅರ್ಜಿಗಳನ್ನು ಮಾತ್ರ ಪರಿಷ್ಕರಿಸಲಾಗಿದೆ. ಉಳಿದ 23 ಲಕ್ಷ ಕುಟುಂಬಗಳು ಇದೀಗ ಎತ್ತಂಗಡಿಯ ಆತಂಕ ಎದುರಿಸುತ್ತಿವೆ. ಇದರಂತೆ ಶೇ.2ರಷ್ಟು ಬುಡಕಟ್ಟು ಕುಟುಂಬಗಳನ್ನು ಅರಣ್ಯ ವಾಸಿಗಳೆಂದು ಇದುವರೆಗೂ ಪರಿಗಣಿಸಲಾಗಿದ್ದು, ಉಳಿದವರು ಅಕ್ರಮವಾಸಿಗಳೆಂದು ಪರಿಗಣಿಸಲಾಗಿದೆ. ಇದು ಬಡಕಟ್ಟು ಸಮುದಾಯಗಳಿಗೆ ಮಾಡಿದ ದ್ರೋಹವಾಗಿದ್ದು, ಅವರ ಬದುಕಿನ ಹಕ್ಕನ್ನು ಕಸಿದುಕೊಳ್ಳುವುದನ್ನು ಜೆಡಿಎಸ್ ಪಕ್ಷ ಸಹಿಸುವುದಿಲ್ಲ.
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News