ಚಿಕ್ಕಮಗಳೂರು-ತರೀಕೆರೆ ಮಾರ್ಗದಲ್ಲಿ 25 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕೆಲಸ: ಶೋಭಾ ಕರಂದ್ಲಾಜೆ

Update: 2019-02-25 17:52 GMT

ಚಿಕ್ಕಮಗಳೂರು.ಫೆ.25: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರೂ. 25 ಕೋಟಿಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಚಿಕ್ಕಮಗಳೂರು-ತರೀಕೆರೆ ರೈಲ್ವೆ ಮಾರ್ಗದಲ್ಲಿ ಮಾಡಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅವರು ಇಂದು ನೈರುತ್ಯ ರೈಲ್ವೆ ವತಿಯಿಂದ ಕಡೂರು ತಾಲೂಕಿನ ದೇವನೂರಿನಲ್ಲಿ ಲೆವಲ್ ಕ್ರಾಸಿಂಗ್ ರಸ್ತೆ ಕೆಳ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಣೆ, ಕೆಳ ರಸ್ತೆ ಸೇತುವೆ ಶಂಕುಸ್ಥಾಪನೆ ಹಾಗೂ ಲೇವಲ್ ಕ್ರಾಸಿಂಗ್ ಗೇಟ್ 112 , 113 ಬದಲಿನ ರಸ್ತೆ ಕೆಳ ಸೇತುವೆಯ ವಿಸ್ತರಣೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.

ಈಗ ನಿರ್ಮಾಣವಾಗಿರುವ ರಸ್ತೆ ಕೆಳ ಸೇತುವೆ ಅವೈಜ್ಞಾನಿಕವಾಗಿ ಕೂಡಿದೆ. ಇದಕ್ಕೆ ಪರ್ಯಾಯವಾಗಿ ಬದಲಿ ರಸ್ತೆ ನಿರ್ಮಿಸಬೇಕೆಂದು ಈ ಭಾಗದ ಜನರ ಮನವಿಯಾಗಿದ್ದು, ಸ್ಥಳದಲ್ಲಿದ್ದ ರೈಲ್ವೆ ಅಧಿಕಾರಿಗಳಿಗೆ ಜಂಟಿ ಸರ್ವೆ ಮಾಡಿ ತಮಗೆ ವರದಿ ಬರುವ ತನಕ ಕೆಲಸ ಪ್ರಾರಂಭಿಸಬಾರದು ಎಂದು ತಿಳಿಸಿದರು.

ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಶಿವಮೊಗ್ಗ ಇಂಟರ್‍ಸಿಟಿ ರೈಲನ್ನು ದೇವನೂರಿನಲ್ಲಿ ನಿಲುಗಡೆ ಮಾಡಬೇಕೆಂಬ ಒತ್ತಾಯಕ್ಕೆ ಸ್ಪಂದಿಸಿದ ಸಂಸದರು ಕೇಂದ್ರ ರೈಲ್ವೆ ಸಚಿವರ ಬಳಿ ಮಾತನಾಡಿ ಇಂಟರ್‍ಸಿಟಿ ರೈಲನ್ನು ದೇವನೂರಿನಲ್ಲಿ ನಿಲುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾಫಿ ಮಂಡಳಿ ಅಧ್ಯಕ್ಷ ಎಂಎಸ್.ಭೋಜೇಗೌಡ, ಜ.ಪಂ ಸದಸ್ಯ ವಿಜಯ ಕುಮಾರ್, ದೇವನೂರು ಗ್ರಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ, ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಭಂದಕಿ ಅಪರ್ಣ ಗರ್ಗ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News