ಪತ್ನಿಗೆ ವರದಕ್ಷಿಣೆ ಕಿರುಕುಳ: ಪತಿಗೆ 1 ವರ್ಷ ಶಿಕ್ಷೆ, ದಂಡ

Update: 2019-02-25 18:27 GMT

ಶಿವಮೊಗ್ಗ, ಫೆ. 25: ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪತಿಗೆ ಶಿವಮೊಗ್ಗದ 2 ನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರು ಎರಡು ಐಪಿಸಿ ಕಲಂಗಳಡಿ ಒಟ್ಟಾರೆ 1 ವರ್ಷ 6 ತಿಂಗಳು ಸಾದಾ ಸಜೆ ಹಾಗೂ 1500 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದ ನಿವಾಸಿ ಪ್ರಸನ್ನ ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ. ಐಪಿಸಿ ಕಲಂ 498 (ಎ) ರ ಅಡಿ 1 ವರ್ಷ ಸಾದಾ ಸಜೆ ಶಿಕ್ಷೆ - 1000 ರೂ. ದಂಡ ಹಾಗೂ ಐಪಿಸಿ ಕಲಂ 506 ರ ಅಪರಾಧಕ್ಕೆ 6 ತಿಂಗಳು ಸಾದಾ ಸಜೆ - 500 ರೂ. ದಂಡ ವಿಧಿಸಲಾಗಿದೆ. 

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಈಶ್ವರಪ್ಪ, ರತ್ನಮ್ಮ, ಸುಂದರೇಶ್‍ರವರನ್ನು ನ್ಯಾಯಾಧೀಶರು ಆರೋಪಮುಕ್ತಗೊಳಿಸಿದ್ದಾರೆ. ನ್ಯಾಯಾಧೀಶರಾದ ಅಂಬಣ್ಣರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಸಿ.ದೀಪಕ್‍ರವರು ವಾದ ಮಂಡಿಸಿದ್ದರು. 

ಘಟನೆ ಹಿನ್ನೆಲೆ: ಶಿಕ್ಷೆಗೊಳಗಾದ ಪ್ರಸನ್ನ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದ ನಿವಾಸಿ ರೇಣುಕಾ ಎಂಬುವರನ್ನು ವಿವಾಹವಾಗಿದ್ದ. ನಂತರ ತನ್ನ ಕುಟುಂಬದ ಇತರೆ ಆಪಾದಿತರ ಜೊತೆ ಸೇರಿ ಹೆಚ್ಚಿನ ಹಣ ತರುವಂತೆ ವರದಕ್ಷಿಣೆ ಕಿರಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಕುರಿತಂತೆ ಮಹಿಳೆಯು ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. 

ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಯ ವೇಳೆ ಪತಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಹಾಗೆಯೇ 10 ಸಾವಿರ ರೂ.ಗಳನ್ನು ಪತ್ನಿಗೆ ಪರಿಹಾರ ರೂಪದಲ್ಲಿ ನೀಡುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News