"ಆಧಾರರಹಿತ ಪ್ರಕರಣಗಳು ವಜಾಗೊಂಡ ಬಳಿಕ ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ"!

Update: 2019-02-26 04:28 GMT

ಹೊಸದಿಲ್ಲಿ, ಫೆ.26: ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಕೂಡಾ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಾರೆ ಎಂಬ ವದಂತಿಗಳ ಬೆನ್ನಲ್ಲೇ, "ಆಧಾರ ರಹಿತ ಪ್ರಕರಣಗಳು ವಜಾ ಆದ ಬಳಿಕ ರಾಜಕೀಯಕ್ಕೆ ಸೇರ್ಪಡೆಯಾಗುತ್ತೇನೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಈಗಿನಿಂದಲೇ ಕೆಲಸ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.

ಮೊರದಾಬಾದ್ ಕ್ಷೇತ್ರದಿಂದ ವಾದ್ರಾ ಸ್ಪರ್ಧಿಸುವಂತೆ ಆಗ್ರಹಿಸುವ ಪೋಸ್ಟರ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, "ಮೊದಲು ನಾನು ಆಧಾರರಹಿತ ಆಪಾದನೆ ಮತ್ತು ಆರೋಪಗಳಿಂದ ಮುಕ್ತನಾಗಬೇಕು; ಆದರೆ ಖಂಡಿತವಾಗಿಯೂ ನಾನು ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸುತ್ತೇನೆ. ಈ ವಿಚಾರದಲ್ಲಿ ಆತುರ ಇಲ್ಲ. ನಾನು ಬದಲಾವಣೆ ತರಬಲ್ಲೆ ಎಂದು ಭಾವನೆ ಜನರಲ್ಲಿ ಮೂಡಬೇಕು. ಎಲ್ಲವೂ ಆಯಾ ಕಾಲಕ್ಕೆ ಆಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ವಾದ್ರಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದಾರೆ. "ಹಲವು ವರ್ಷಗಳಿಂದ ದೇಶದ ಹಲವು ಕಡೆಗಳಲ್ಲಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದೆ. ಆದರೆ ಉತ್ತರ ಪ್ರದೇಶದ ಜನತೆಗೆ ಹೆಚ್ಚಿನದು ಮಾಡಬೇಕು ಹಾಗೂ ಸಾಧ್ಯವಾದಷ್ಟು ಬದಲಾವಣೆಗಳನ್ನು ತರಬೇಕು ಎಂಬ ಭಾವನೆ ಮೂಡಿಸಿದೆ. ಇಷ್ಟು ವರ್ಷಗಳ ಅನುಭವ ಹಾಗೂ ಕಲಿಕೆ ವ್ಯರ್ಥವಾಗಬಾರದು; ಅದು ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗಬೇಕು. ಎಲ್ಲ ಆರೋಪಗಳು ಮುಗಿದ ಬಳಿಕ ಜನರ ಸೇವೆಯಲ್ಲಿ ದೊಡ್ಡ ಪಾತ್ರಕ್ಕೆ ನಾನು ಸಮರ್ಪಿಸಿಕೊಳ್ಳಬೇಕು" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News