ಉಗ್ರರ ಮೇಲೆ ಸೇನಾ ದಾಳಿ: ಮಡಿಕೇರಿಯಲ್ಲಿ ಬಿಜೆಪಿ ಸಂಭ್ರಮಾಚರಣೆ
ಮಡಿಕೇರಿ, ಫೆ.26 : ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿರುವ ಭಾರತೀಯ ಸೇನೆಯ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರು ಹಾಗೂ ಸಾರ್ವಜನಿಕರು ಸೈನಿಕರ ಪರ ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಸೇನಾಪಡೆ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪಾಕ್ ಪ್ರಚೋದಿತ ಉಗ್ರಗಾಮಿಗಳ ಕೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯ ಮೂಲಕ ತಕ್ಕ ಉತ್ತರ ನೀಡಿದ್ದು, ಇನ್ನಾದರೂ ಪಾಕಿಸ್ತಾನ ತನ್ನ ತಪ್ಪನ್ನು ತಿದ್ದುಕೊಳ್ಳಲಿ ಎಂದರು.
ನಿವೃತ ಯೋಧ ಲಕ್ಷ್ಮಣ್ ಮಾತನಾಡಿ, ಎರಡನೇ ಸರ್ಜಿಕಲ್ ಸ್ಟ್ರೈಕ್ ಹೆಮ್ಮೆಯ ವಿಚಾರವಾಗಿದ್ದು, ಭಾರತೀಯ ಯೋಧರು ಯಾವುದಕ್ಕೂ ಹಿಂಜರಿಯುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಉಗ್ರರ ದಾಳಿ ಮುಂದುವರೆದಲ್ಲಿ ಭಾರತೀಯ ಸೇನೆ ಉಗ್ರರನ್ನು ಧ್ವಂಸಗೊಳಿಸುವುದು ಖಚಿತವೆಂದರು.
ರಜೆಯಲ್ಲಿ ಆಗಮಿಸಿದ್ದ ಯೋಧ ದೀಕ್ಷಿತ್ ಶೆಟ್ಟಿ ಮಾತನಾಡಿ, ಭಾರತೀಯ ಸೈನ್ಯದ 44 ಯೋಧರು ಉಗ್ರರ ದಾಳಿಯಿಂದ ಸಾವನ್ನಪ್ಪಿದ್ದರು. ಇದೀಗ ಪಾಕ್‍ಗೆ ನಮ್ಮ ಸೇನೆ ತಕ್ಕ ಉತ್ತರ ನೀಡಿದೆ. ಇಂದು ಜನರಲ್ಲಿ ದೇಶ ಪ್ರೇಮ ಮೂಡಿಸಿರುವುದು ಸಂತಸ ತಂದಿದೆ. ತಾನು ರಜೆಯ ಮೇಲೆ ಬಂದಿದ್ದು, ದೇಶ ಸೇವೆಗಾಗಿ ಯಾವುದೇ ಸಂದರ್ಭದಲ್ಲೂ ಕರೆ ಬಂದರೂ ತೆರಳುವುದಾಗಿ ತಿಳಿಸಿದರು.
ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಜನಾರ್ಧನ್, ಜಗದೀಶ್, ಅನಿತಾ ಪೂವಯ್ಯ ಸೇರಿದಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.