ದೇಶದಲ್ಲಿ ಮುಸ್ಲಿಮರು ನಾಲ್ಕನೇ ದರ್ಜೆ ಪ್ರಜೆಗಳಾಗಿದ್ದಾರೆ: ಮುಸ್ಲಿಂ ಜಮಾಅತ್ ನಾಯಕ ಅಬೂ ಸುಫ್ಯಾನ್ ಮದನಿ
ಚಿಕ್ಕಮಗಳೂರು, ಫೆ.26: ಅಪ್ಪಟ ಭಾರತೀಯರೇ ಆಗಿರುವ ದೇಶದ ಮುಸ್ಲಿ ಸಮುದಾಯವನ್ನು ಎಲ್ಲ ರಾಜಕೀಯ ಪಕ್ಷಗಳು ಮತಗಳಿಕೆಯ ಗುರಾಣಿಯನ್ನಾಗಿಸಿಕೊಂಡಿವೆ. ಸಮುದಾಯದ ಅಭಿವೃದ್ಧಿ, ರಕ್ಷಣೆ, ಬೇಡಿಕೆಗಳಿಗೆ ತಕ್ಕ ರೀತಿಯಲ್ಲಿ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ಕಾರಣದಿಂದ ಸಮುದಾಯ ದೇಶದಲ್ಲಿ ನಾಲ್ಕನೇ ದರ್ಜೆಗಿಳಿಯಲ್ಪಡುವಂತಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್‍ನ ರಾಜ್ಯ ಉಪಾಧ್ಯಕ್ಷ ಎಚ್.ಐ.ಅಬೂ ಸುಫ್ಯಾನ್ ಮದನಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಉಪ್ಪಳ್ಳಿ ಬಡಾವಣೆಯ ಮಸ್ಜಿದ್ ಎ ಝಮಾಲ್ ಶಾ ಮಸೀದಿ ಸಭಾಂಗಣದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್‍ನ ಜಿಲ್ಲಾ ಸಮಿತಿಯ ರಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಯಾವುದೇ ಪಕ್ಷಗಳು ದೇಶದ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡುತ್ತಿವೆಯೇ ಹೊರತು ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆಗಳ ಜಾರಿಗೆ ಹಿಂದು ಮುಂದು ನೋಡುತ್ತಿವೆ. ಇದರ ಫಲವಾಗಿ ಸಮುದಾಯವು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯುವಂತಾಗಿದ್ದು, ದೇಶದಲ್ಲಿ 4ನೇ ದರ್ಜೆಯ ಪ್ರಜೆಗಳಂತಾಗಿದ್ದೇವೆ. ಮುಂದಿನ ದಿನಗಳಲ್ಲಿ ಈ ಸಮುದಾಯ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಅವರು ಕರೆ ನೀಡಿದರು.
ರಾಜ್ಯ ಸರಕಾರದ ವಕ್ಛ್ ಬೋರ್ಡ್‍ನಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತಿದೆ. ಆದರೆ ಸರಕಾರಗಳಿಗೆ ವಕ್ಛ್ ಬೋರ್ಡ್‍ನ ಹಣ ಬೇಕಾಗಿದೆಯೇ ಹೊರತು ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿರುವ ಸಾವಿರಾರು ಮದರಸ, ಮಸೀದಿಗಳಿಗೆ ದಾಖಲೆಗಳಿಲ್ಲ, ಮುಸ್ಲಿಂ ಸಮುದಾಯದವರು ಆರಂಭಿಸುವ ಶೈಕ್ಷಣಿಕ ಸಂಸ್ಥೆಗಳಿಗೆ ಅನುಮತಿ ಸುಲಭವಾಗಿ ಸಿಗುವುದಿಲ್ಲ. ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ವಕ್ಛ್ ಬೋರ್ಡ್ ಕಟ್ಟಡಗಳು, ಮಸೀದಿಗಳ ನವೀಕರಣಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದೆಲ್ಲೆಡೆ ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶ, ಬಡಾವಣೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುತ್ತಿಲ್ಲ, ಮಸೀದಿಗಳನಿರ್ಮಾಣಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ಮುಸ್ಲಿಂ ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡುವ, ಸಮುದಾಯವನ್ನು ಛಿದ್ರಮಾಡುವ ಶಕ್ತಿಗಳು ಹೆಚ್ಚುತ್ತಿವೆ. ಅಲ್ಲದೇ ಖುರಾನ್ ಹೆಸರು ಹೇಳಿಕೊಂಡೇ ಇಸ್ಲಾಂ ಅನ್ನೇ ನಾಶ ಮಾಡುವ ಸಂಚೂ ನಡೆಯುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವುದೂ ಸೇರಿದಂತೆ ಸಮುದಾಯದ ಈ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ಮುಸ್ಲಿಂ ಜಮಾಅತ್ ಹುಟ್ಟು ಪಡೆದಿದೆಯೇ ಹೊರತು ರಾಜಕಾರಣ ಮಾಡುವ ಉದ್ದೇಶದಿಂದಲ್ಲ. ರಾಜ್ಯದೆಲ್ಲೆಡೆ ಇದರ ಶಾಖೆಗಳು ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.
ರಾಜ್ಯ ಮಟ್ಟದ ಕರ್ನಾಟಕ ಮುಸ್ಲಿಂ ಜಮಾಅತ್‍ನ ನಿರ್ದೇಶನದಂತೆ ಜಿಲ್ಲಾ, ತಾಲೂಕು ಮಟ್ಟದ ಜಮಾಅತ್‍ಗಳು ಕಾರ್ಯ ನಿರ್ವಹಿಸಲಿವೆ ಎಂದ ಅವರು, ಸಮುದಾಯದ ಎಲ್ಲ ಮೊಹಲ್ಲಾಗಳಲ್ಲಿರುವ ಪ್ರತೀ ಸದಸ್ಯ, ಮಹಿಳೆಯರು, ಯುವಕ, ಯುವತಿಯರು, ಶಿಕ್ಷಣ ಪಡೆದವರು, ಪಡೆಯದವರೂ ಸೇರಿದಂತೆ ಅಂಗವಿಕಲರು, ವಿಧವೆಯರಾದಿಯಾಗಿ ಇಡೀ ಸಮುದಾಯದ ಮಾಹಿತಿ ಸಂಗ್ರಹಿಸುವುದು ಸಂಘಟನೆಯ ಆದ್ಯ ಕೆಲಸವಾಗಿದ್ದು, ಸರಕಾರ ಈ ಸಮುದಾಯದ ಅಭಿವೃದ್ಧಿಗೆ ನೀಡುವ ಅನುದಾನ, ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಾಡುವುದೂ ಸೇರಿದಂತೆ ಸಮುದಾಯವನ್ನು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮೇಲೆತ್ತುವುದು ಹಾಗೂ ಪ್ರತೀ ಮೊಹಲ್ಲಾಗಳ ಸುಧಾರಣೆಯೊಂದಿಗೆ ಸಾಂಸ್ಕೃತಿಕವಾಗಿ ಅಭಿವೃದ್ಧಿ ಪಡಿಸುವುದು ಸಂಘಟನೆಯ ಉದ್ದೇಶವಾಗಿದೆ. ಇದಕ್ಕೆ ಸಮುದಾಯದ ಒಗ್ಗಟ್ಟು ಅತ್ಯಗತ್ಯ ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಮುಸ್ಲಿಂ ಜಮಾಅತ್‍ನ ಮತ್ತೋರ್ವ ರಾಜ್ಯ ಉಪಾಧ್ಯಕ್ಷ ಡಾ.ಫಾಝಿಲ್ ರಿಝ್ವಿ ಮಾತನಾಡಿ, ರಾಜ್ಯದಲ್ಲಿರುವ ಅಧಿಕೃತ 90 ಲಕ್ಷ ಮುಸ್ಲಿಮರಿಗೆ ಶೇ.3ರಷ್ಟೂ ರಾಜಕೀಯ ಪ್ರಾತಿನಿದ್ಯ ಇಲ್ಲದಿರುವುದು ವಿಷಾದದ ಸಂಗತಿ. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಶಾಸಕರು, ಸಚಿವರು ಕಡಿಮೆ ಇದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಕೂಡಿದ ಕೆಲ ರಾಜಕೀಯ ಪಕ್ಷಗಳಿಂದಾಗಿ ಸಮುದಾಯ ಕೆಲವೆಡೆ ವಿರೋಧ, ಆತಂಕ ಎದುರಿಸುವಂತಾಗಿದ್ದರೆ, ಇನ್ನು ಕೆಲ ಪಕ್ಷಗಳು ಸಮುದಾಯವನ್ನು ಓಟ್ ಬ್ಯಾಂಕ್ ಹಿನ್ನೆಲೆಯಲ್ಲಿ ತುಷ್ಠೀಕರಣ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದ ಅವರು, ಮುಸ್ಲಿಂ ಸಮುದಾಯಕ್ಕೆ ಶೇ.20 ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಆಳುವ ವರ್ಗದವರನ್ನು ಆಗ್ರಹಿಸಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್‍ನ ಜಿಲ್ಲಾ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ನೇಮಿಸಲಾಯಿತು. ಮುದರಿಸ್ ಮುಫ್ತಿ ಸಾಬ್ ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದರು. ಕಾಫಿ ಬೆಳೆಗಾರ ಮುನೀರ್ ಹಾಜಿ ಸಾಬ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗದ ಆದಂ ಸಖಾಫಿ ವಿಷಯ ಮಂಡಿಸಿದರು. ಉಪ್ಪಳ್ಳಿಯ ಸೈಯದ್ ಹಾಮೀಮ್ ತಂಙಳ್, ಶರಫುದ್ದೀನ್ ಸಅದಿ, ಯೂಸೂಫ್ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲೆ ಹಾಗೂ ನಗರದ ವಿವಿಧ ಮಸೀದಿಗಳ ಖತೀಬ್, ಮುತವಲ್ಲಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಹುಸೈನ್ ಸಅದಿ ಹೊಸ್ಮಾರ್ ಸ್ವಾಗತಿಸಿ, ವಂದಿಸಿದರು.
ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ಬರಲಿದೆ. ಎಲ್ಲ ಪಕ್ಷಗಳು ಸಮುದಾಯದವರ ಮನೆ ಬಾಗಿಲಿಗೆ ಬರುತ್ತಾರೆ. ಈ ವೇಳೆ ಸಮುದಾಯದ ಸಮಸ್ಯೆಗಳು, ಬೇಡಿಕೆಗಳನ್ನು ಮುಂದಿಡುವ ಕೆಲಸವಾಗಬೇಕು. ಇದಕ್ಕೆ ಸ್ಪಂದಿಸದವರನ್ನು ಚುನಾವಣೆಗಳ ಮೂಲಕವೇ ತಕ್ಕ ಪಾಠ ಕಲಿಸಬೇಕು.
- ಎಚ್.ಐ.ಅಬೂ ಸುಫ್ವಾನ್ ಮದನೀ, ಕರ್ನಾಟಕ ಮುಸ್ಲಿಂ ಜಮಾಅತ್‍ನ ರಾಜ್ಯ ಉಪಾಧ್ಯಕ್ಷ