×
Ad

ಉಗ್ರರ ಮೇಲಿನ ದಾಳಿಗಾಗಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಬೇಕು: ಮಲ್ಲಿಕಾರ್ಜುನ ಖರ್ಗೆ

Update: 2019-02-26 18:36 IST

ಕಲಬುರ್ಗಿ, ಫೆ.26: ಪಾಕ್ ಬೆಂಬಲಿತ ಉಗ್ರರ ಮೇಲೆ ನಮ್ಮ ವಾಯು ಸೇನೆ ತಕ್ಕ ಕಾರ್ಯಾಚರಣೆ ಮಾಡಿದೆ. ಇದಕ್ಕಾಗಿ ನಮ್ಮ ಭಾರತೀಯ ಸೇನೆಯನ್ನು ಅಭಿನಂದಿಸುತ್ತೇನೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ ನಡೆಸಿದ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಉಗ್ರರ ಮೇಲೆ ದಾಳಿ ಎಲ್ಲಾ ಸರಕಾರಗಳು ಮಾಡಿಕೊಳ್ಳುತ್ತಾ ಬಂದಿವೆ. ಯುಪಿಎ ಸರಕಾರವಿದ್ದಾಗ ಆರು ಬಾರಿ ದಾಳಿ ನಡೆಸಿತ್ತು ಎಂದು ತಿಳಿಸಿದರು.

ಯಾವ ಸಂದರ್ಭದಲ್ಲಿ ಉಗ್ರರ ಮೇಲೆ ದಾಳಿ ನಡೆಸಬೇಕು ಎಂಬುದನ್ನು ಭಾರತೀಯ ಸೇನೆ ನಿರ್ಣಯ ಕೈಗೊಳ್ಳುತ್ತದೆ. ಸೇನೆಗೆ ಬಲ ಕೊಡುವ ಕೆಲಸವನ್ನು ನಾವು ಮಾಡಬೇಕು. ನಮ್ಮ ಸೈನಿಕರ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಮಾಡುವ ಅವಶ್ಯಕತೆ ಇಲ್ಲ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಒಂದು ಲಕ್ಷ ಪಾಕ್ ಸೈನಿಕರನ್ನು ಬಂಧಿಸಲಾಗಿತ್ತು ಎಂದರು. ಇಂದು(ಮಂಗಳವಾರ) ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ಇದೆ. ಭಾರತೀಯ ಸೇನೆ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದರು.

ಸಂಭ್ರಮಾಚರಣೆ: ಪುಲ್ವಾಮ ಉಗ್ರರ ದಾಳಿಗೆ ಭಾರತೀಯ ವಾಯುಸೇನೆ ದಾಳಿ ನಡೆಸುವ ಮೂಲಕ ಪ್ರತೀಕಾರ ನಡೆಸಿದ ಹಿನ್ನೆಲೆ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಸಂಭ್ರಮಾಚರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News