ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ರಾಜಕೀಯ ಕ್ಷೇತ್ರ ಹಾಳಾಗುತ್ತಿದೆ: ರವಿಕೃಷ್ಣಾರೆಡ್ಡಿ

Update: 2019-02-26 13:10 GMT

ಹುಬ್ಬಳ್ಳಿ, ಫೆ.26: ರಾಜ್ಯದಲ್ಲಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಾಗಿ ದೇಶ ಹಾಗೂ ರಾಜ್ಯ ರಾಜಕಾರಣ ವ್ಯವಸ್ಥೆಯು ಹಾಳಾಗುತ್ತಿದೆ ಎಂದು ಕರ್ನಾಟಕ ಜನತಾ ರಂಗದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಸರಕಾರ ಎರಡು ಲಕ್ಷ ನಲವತ್ತಮೂರು ಸಾವಿರ ಕೋಟಿ ರೂ. ಬಜೆಟ್ ಮಂಡನೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಸರಕಾರಕ್ಕೆ ಬಜೆಟ್ ಹೆಚ್ಚಿಗೆ ಮಾಡುವುದರಿಂದ ಲಾಭ ಬರುತ್ತಿದೆ. ಬಜೆಟ್ ವಿಂಗಡನೆ ಮಾಡಿದರೆ ಒಂದು ತಾಲೂಕಿಗೆ ಒಂದು ಸಾವಿರ ಕೋಟಿ ರೂ.ಬರುತ್ತೆ. ಅದರ ಬಳಕೆ ಬಗ್ಗೆ ಚರ್ಚೆ ಮಾಡದೆ ಶಾಸನ ಸಭೆಯಲ್ಲಿ ಯಾವ ರೀತಿಯಾಗಿ ವರ್ತನೆ ಮಾಡಿದರು ಅನ್ನುವುದನ್ನು ಪ್ರತ್ಯಕ್ಷವಾಗಿ ತೋರಿಸಿದ್ದಾರೆ ಎಂದು ಹರಿಹಾಯ್ದರು.

ನಿರುದ್ಯೋಗ ವ್ಯವಸ್ಥೆ ನಿಯಂತ್ರಣಕ್ಕೆ ತರಲು ಈ ಮೂರು ರಾಜಕೀಯ ಪಕ್ಷಗಳು ವಿಫಲವಾಗುತ್ತಿವೆ. ಒಂದು ಎಸ್‌ಡಿಎ ಹಾಗೂ ಎಫ್‌ಡಿಎ 4,500 ಹುದ್ದೆಗಳಿಗೆ 13.5ಲಕ್ಷ ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 700 ಗ್ರಾಮಲೆಕ್ಕಾಧಿಕಾರಿ ಹುದ್ದೆಗೆ 10.5 ಲಕ್ಷ ಜನ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದಕ್ಕೆ ಕಾರಣ ರಾಜಕೀಯ ಪಕ್ಷಗಳಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಅವರು ಕಿಡಿಕಾರಿದರು. ಬಂಡೀಪುರ ಅಭಯಾರಣ್ಯ ಅಗ್ನಿ ಅವಘಡದ ಬಗ್ಗೆ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶದ ನಂತರದಲ್ಲಿ ಒಂದು ಹೆಲಿಕಾಪ್ಟರ್ ಕಳಿಸಿದ್ದಾರೆ. ಜನಪ್ರತಿನಿಧಿಗಳಿಗೆ ರಾಜ್ಯದ ಹಿತಾಸಕ್ತಿಯ ಬಗ್ಗೆ ಯಾವುದೆ ಕಾಳಜಿ ಇಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.

ಈ ಎಲ್ಲ ವ್ಯವಸ್ಥೆಯನ್ನು ಬದಿಗಿಟ್ಟು ಸಾರ್ವಜನಿಕರಿಗೆ ಉತ್ತಮ ರಾಜಕೀಯ ಸೇವೆ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ರಂಗ ಪಕ್ಷವನ್ನು ಸ್ಥಾಪನೆ ಮಾಡಲಾಗುತ್ತಿದೆ. ಅಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ರಂಗದಿಂದ ರಾಜ್ಯದ 28 ಕ್ಷೇತ್ರದಲ್ಲಿ ಸ್ಪರ್ಧಿಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ವಿಕಾಸ ಸೊಪ್ಪಿನ ಹಾಗೂ ಶೈಲೇಂದ್ರ ಪಾಟೀಲ ಸಂಭವನೀಯ ಆಭ್ಯರ್ಥಿಗಳಾಗಿದ್ದಾರೆ. ಅಲ್ಲದೆ ದಾವಣಗೆರೆ, ಬೆಳಗಾವಿ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News