×
Ad

ಉಗ್ರರನ್ನು ಮಟ್ಟ ಹಾಕುವ ಸಾಮರ್ಥ್ಯ ಭಾರತೀಯ ಸೇನೆಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-02-26 19:32 IST

ಚಿಕ್ಕಮಗಳೂರು, ಫೆ.26: ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆಯನ್ನು ಅಭಿನಂದಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ದೇವಾಂಗ ನೌಕರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫುಲ್ವಾಮ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಮಂಗಳವಾರ ಮುಂಜಾನೆ ಪಾಕಿಸ್ತಾನದ ಗಡಿಭಾಗದಲ್ಲಿದ್ದ ಉಗ್ರರ ಅಡಗುದಾಣಗಳ ಮೇಲೆ ವಾಯುದಾಳಿ ನಡೆಸಿರುವುದು ಹೆಮ್ಮೆ ಸಂಗತಿಯಾಗಿದೆ ಎಂದ ಅವರು, ಸೈನ್ಯದ ಈ ದಾಳಿಯಿಂದಾಗಿ ಫುಲ್ವಾಮದಲ್ಲಿ ಸೈನಿಕರನ್ನು ಹತ್ಯೆ ಮಾಡಿದ ಉಗ್ರರಿಗೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದರು.

ಉಗ್ರರ ಮೇಲೆ ದಾಳಿ ಮಾಡಿದ ಸೇನೆಯ ಸಾಹಸಕ್ಕೆ ನಮೋ ನಮೋ ಎಂದ ಅವರು, ಉಗ್ರರು ಯಾರೇ ಇರಲಿ ಅವರನ್ನು ಆರಂಭದಲ್ಲೇ ಮಟ್ಟ ಹಾಕಬೇಕು. ಉಗ್ರರ ಸಂತಿತಿಯನ್ನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಬಾರದು. ಉಗ್ರರನ್ನು ಬುಡಸಮೇತ ಕಿತ್ತುಹಾಕಬೇಕು. ಭಾರತೀಯ ಸೇನೆಗೆ ಇಂತಹ ಸಾಮರ್ಥ್ಯವಿದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸೈನ್ಯವನ್ನು ಸಮರ್ಪಕವಾಗಿ ಬೆಳಸಿಕೊಳ್ಳಬೇಕೆಂದರು.

ಮಂಗಳವಾರ ತರೀಕೆರೆ ಪಟ್ಟಣಕ್ಕೆ ಬರುವವರೆಗೆ ದಾಳಿಯ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ದಾಳಿ ಬಗ್ಗೆ ಸೇನೆಯ ಅಥವಾ ಕೇಂದ್ರದ ಅಧೀಕೃತ ಮಾಹಿತಿ ಇಲ್ಲದೇ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಭಾರತೀಯ ಸೇನೆ ವಾಯು ದಾಳಿ ಮೂಲಕ ಪಾಕಿಸ್ತಾನದ ಗಡಿಯಲ್ಲಿದ್ದ ಉಗ್ರರ ಅಡಗುದಾಣಗಳು, ಶಿಬಿರಗಳನ್ನು ಧ್ವಂಸ ಮಾಡಿರುವ ಬಗ್ಗೆ ಮಾಹಿತಿ ಪಡೆದಿದ್ದು, ಸೇನೆಯ ಈ ಸಾಹಸವನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News