ಹಾಸನ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದ ಸಿಎಂ ಕುಮಾರಸ್ವಾಮಿ

Update: 2019-02-26 15:31 GMT

ಹಾಸನ,ಫೆ.26: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಭಿವೃದ್ಧಿ ಕಾಮಾಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿ ಎಚ್.ಡಿ  ಕುಮಾರಸ್ವಾಮಿ ಕಡಿಮೆ ವೆಚ್ಚದ ಲಾಭದಾಯಕ ಕೃಷಿಗೆ ಆದ್ಯತೆ, ಆನೆ ಹಾವಳಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ತಿಳಿಸಿ, ರೈತರು ಸ್ವಾಭಿಮಾನದಿಂದ ಬದುಕಲು ಕರೆ ನೀಡಿದರು.

ಸಕಲೇಶಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನೆ ಹಾವಳಿ ಸೇರಿದಂತೆ ಸಕಲೇಶಪುರ ಅಲೂರು ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸಕಲೇಶಪುರ ಎಪಿಎಂಸಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 600 ಕೋಟಿಗೂ ಆಧಿಕ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಭೂಮಿಗೆ ಸಂಭಂದಿಸಿದ ತೊಡಕುಗಳನ್ನು ಬಗೆಹರಿಸಲಾಗುವುದು. ಎತ್ತಿನಹೊಳೆ ಯೋಜನೆ ಮೂಲಕ ಸಕಲೇಶಪುರದಿಂದ ಬಯಲುಸೀಮೆಗೆ ನೀರು ಹರಿಸುವ ಯೋಜನೆ ನಡೆಯುತ್ತಿದೆ. ಆದರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದನ್ನು ಶೀಘ್ರವಾಗಿ ಬಗೆಹರಿಸಲು ಅನುದಾನ ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಕಲೇಶಪುರ, ಕೊಡಗು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆನೆ ದಾಳಿ ಮಂದುವರೆದಿದೆ. ಸಕಲೇಶಪುರ ಆಲೂರು ತಾಲೂಕುಗಳ ಆನೆ ಸಮಸ್ಯೆಗೆ ಶಾಶ್ವತ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ. ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಆನೆ ಕಾರಿಡಾರ್ ಯೋಜನೆ ಬಗ್ಗೆಯೂ ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರೈತರ ಸಾಲಮನ್ನಾ ಪ್ರಕ್ರಿಯೆ, ಈವರೆಗೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನದ ಬಗ್ಗೆಯೂ ಅವರು ವಿವರಿಸಿದರು.

ಮಾತೃಶ್ರೀ ಯೋಜನೆಯಡಿ 6 ರಿಂದ 12 ತಿಂಗಳ ವರಗೆ 12,000 ರೂ. ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಹಣವನ್ನು ಹೆಚ್ವಿಸಲಾಗುವುದು. ಇದೇ ರೀತಿ ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಮಾಸಿಕ ಪಿಂಚಣಿಯನ್ನು 1,000 ರೂ. ಗೆ ಏರಿಸಿದ್ದು ಮಂದಿನ ವರ್ಷದಿಂದ ಅದನ್ನು 2,000 ರೂ. ಗಳಿಗೆ ಏರಿಸಲು ಚಿಂತಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು. 

ಅರಕಲಗೂಡು ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲಿ ಮಾತನಾಡಿ, ರೈತರು ಆರ್ಥಿಕವಾಗಿ ಸಧೃಡಗೊಂಡು ಪ್ರತಿಯೊಂದು ಕುಟುಂಬವು ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕುಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.

ಅರಕಲಗೂಡಿನಲ್ಲಿ 1563 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೃಷಿ ಪದ್ದತಿಯಲ್ಲಿ ಬದಲಾವಣೆ ತರಬೇಕು. ಆಧುನಿಕ ಕೃಷಿ ಪದ್ದತಿಯಿಂದ ಲಾಭದಾಯಕ ಕಾರ್ಯಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ತಿಳಿಸಿದರು.

'ಕಾಯಕ' ಎಂಬ ಹೆಸರಿನಡಿಯಲ್ಲಿ ಗ್ರಾಮೀಣ ಪ್ರದೇಶದ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂ. ಗಳವರೆಗೆ ಬಡ್ಡಿರಹಿತ ಸಾಲ ನೀಡುವುದು, 5 ಲಕ್ಷ ಮೇಲ್ಟಟ್ಟು 10 ಲಕ್ಷದವರೆಗೆ 3% ಬಡ್ಡಿದರದಲ್ಲಿ ಸಾಲ ನೀಡುವುದರ ಜೊತೆಗೆ ಯಾವ ರೀತಿಯ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಕಡಿಮೆ ವೆಚ್ಚದಲ್ಲಿ ಲಾಭದಾಯಕವಾದ ಕೃಷಿಯನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ವಿನೂತನ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಬೇಲೂರು ತಾಲೂಕು ಹಳಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ರಣಘಟ್ಟ ನೀರಾವರಿ ಯೋಜನೆ ಸೇರಿದಂತೆ 132 ಕೋಟಿ ರೂ. ಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರ 45,000 ಕೋಟಿ ರೂ.ಗಳನ್ನು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ಸುಮಾರು 6,40,000 ಹಾಗೂ ಸಹಕಾರಿ ಬ್ಯಾಂಕಿನ 4 ಲಕ್ಷ ಕುಟುಂಬಗಳಿಗೆ ಸಾಲಮನ್ನಾ ಯೋಜನೆಯ ಲಾಭ ತಲುಪಲಿದೆ. ಈ ನಿಟ್ಟಿನಲ್ಲಿ ಈಗಾಗಲೇ 4,130 ಕೂಟಿ ರೂಪಾಯಿಗಳ ಹಣ ಬಿಡುಗಡೆಯಾಗಿದೆ. ಹಂತಹಂತವಾಗಿ ಬ್ಯಾಂಕುಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ರೈತರು ಕಳೆದ 5-6 ವರ್ಷಗಳಿಂದ ಸುಮಾರು 30,000 ಕೋಟಿಗಳ ಬೆಳೆ ನಷ್ಟವನ್ನು ಹೊಂದಿದ್ದಾರೆ. ಅವರೆಲ್ಲರ ಸಂಕಷ್ಟಕ್ಕೆ ಸ್ಪಂದಿಸಿ ಈ ಸಾಲಮನ್ನಾ ನಿರ್ಧಾರ ಮಾಡಲಾಗಿದೆ. ಇದರಿಂದ ರೈತರ  ಸಂಪೂರ್ಣ ಸಮಸ್ಯೆ ಬಗೆಹರಿಯುತ್ತದೆ ಎಂಬ ಭಾವನೆ ನಮಗಿಲ್ಲ. ಅದಕ್ಕಾಗಿ ಕೃಷಿಗೆ ಪೂರಕವಾದ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ಬೇಲೂರು ಕ್ಷೇತ್ರದ ಜನರ ಬೇಡಿಕೆಗೆ ಸ್ಪಂದಿಸಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇನ್ನೂ ಏನಾದರು ಪ್ರಮುಖ ಯೋಜನೆಗಳು ಬಾಕಿ ಇದ್ದಲ್ಲಿ ಅದನ್ನೂ ಈಡೇರಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ ರೇವಣ್ಣ ಮತ್ತು ಶಾಸಕರಾದ ಲಿಂಗೇಶ್ ಅವರು ಮಾತನಾಡಿ ನೂತನವಾಗಿ ಚಾಲನೆಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ವಿವರಿಸಿದರು.

ಶಾಸಕರಾದ ಬಾಲಕೃಷ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ಚೇತಾ ದೇವರಾಜ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಎಸ್.ಪಿ ಡಾ ಪ್ರಕಾಶ್ ಗೌಡ, ಜಿಲ್ಲಾ ಪಂಚಾಯತ್ ಸಿಇಒ  ಪುಟ್ಟಸ್ವಾಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News