ಯೂಟ್ಯೂಬ್ ವಿಡಿಯೋಗಳ ನಿಯಂತ್ರಣ ಕೋರಿ ಪಿಐಎಲ್ ಸಲ್ಲಿಕೆ: ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್

Update: 2019-02-26 16:52 GMT

ಬೆಂಗಳೂರು, ಫೆ.26: ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಲ್ಟಿ ಮೀಡಿಯಾ ವಿಡಿಯೋಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನಗರದ ಪದ್ಮನಾಭ ಶಂಕರ್ ಎಂಬವರು ಸಲ್ಲಿಸಿರುವ ಪಿಐಎಲ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಅಜೇಶ್ ಕುಮಾರ್ ವಾದ ಮಂಡಿಸಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಬಲವಾಗಿ ಬೆಳೆಯುತ್ತಿದೆ. ಆದರೆ, ಇಲ್ಲಿ ಪ್ರಸಾರವಾಗುವ ಅಥವಾ ಪ್ರದರ್ಶನಗೊಳ್ಳುವ ವಿಡಿಯೋಗಳನ್ನು ನಿಯಂತ್ರಿಸಲು ಸದ್ಯ ಯಾವುದೇ ನಿಯಮಗಳಿಲ್ಲ. ಇದರಿಂದ ಸೆನ್ಸಾರ್ ಆಗದ ವಿಡಿಯೋಗಳು ಯಾವ ನಿರ್ಬಂಧವಿಲ್ಲದೆ ಪ್ರದರ್ಶನಗೊಳ್ಳುತ್ತಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸೆನ್ಸಾರ್ ಆಗದ ವಿಡಿಯೋಗಳಲ್ಲಿರುವ ಅಂಶಗಳು ಸಮಾಜಕ್ಕೆ ತಪ್ಪು ಸಂದೇಶವನ್ನು ಸಾರುವ ಸಾಧ್ಯತೆ ಇರುತ್ತದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳಲ್ಲಿನ ದೃಶ್ಯ ಹಾಗೂ ಸಂಭಾಷಣೆಗಳನ್ನು ನಿಯಂತ್ರಿಸಲು ಸೆನ್ಸಾರ್ ಮಂಡಳಿಯನ್ನು ರಚಿಸಲಾಗಿದೆ. ಇದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಚಲನಚಿತ್ರ, ಧಾರಾವಾಹಿ, ಕಿರುಚಿತ್ರಗಳು, ವಿಡಿಯೋ ತುಣುಕುಗಳು ಮತ್ತಿತರ ಮಲ್ಟಿ ಮೀಡಿಯಾ ವಿಡಿಯೋಗಳನ್ನೂ ನಿಯಂತ್ರಿಸುವ ವ್ಯವಸ್ಥೆ ತರುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿದರು.

ಅರ್ಜಿದಾರರ ಮನವಿ ಏನು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ದೃಶ್ಯಾವಳಿಗಳನ್ನು ಸಿನಿಮಾಟ್ರೋಗ್ರಫಿ ಕಾಯ್ದೆ 1952ರ ಸೆಕ್ಷನ್ 2(ಸಿ) ಅಡಿಗೆ ತರಬೇಕು, ಅಥವಾ ಅವುಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಶಾಸನ ರೂಪಿಸಬೇಕು. ಇಲ್ಲವೇ ನಾಲ್ಕು ಗೋಡೆಗಳ ಮಧ್ಯೆ ಅಥವಾ ಕಚೇರಿಗಳಲ್ಲಿ ಇಂಥ ವಿಡಿಯೋ ಪ್ರದರ್ಶನವಾದರೆ ಅದನ್ನು ಸಿನಿಮಾಟೋಗ್ರಫಿ ಕಾಯ್ದೆ ಅನ್ವಯ ಸಾರ್ವಜನಿಕ ಪ್ರದರ್ಶನ ಎಂದು ಪರಿಗಣಿಸುವಂತಾಗಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕೇಂದ್ರ ಸರಕಾರ ಸೂಕ್ತ ನಿಯಮ ರೂಪಿಸುವವರೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರದರ್ಶನಗೊಳ್ಳುವ ವಿಡಿಯೋಗಳಿಗೆ ಪ್ರಮಾಣಪತ್ರ ನೀಡುವಂತೆ ಕೇಂದ್ರ ಸೆನ್ಸಾರ್ ಮಂಡಳಿಗೆ ಸೂಚಿಸಬೇಕು. ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆದ ಬಳಿಕವೇ ಮಲ್ಟಿಮೀಡಿಯಾ ವಿಡಿಯೋಗಳನ್ನು ಪ್ರದರ್ಶಿಸುವಂತೆ ಅಮೆಜಾನ್, ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತಿತರ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News