ಮಾಲಕನ ಹಲ್ಲೆಯಿಂದ ಅವಮಾನಕ್ಕೊಳಗಾದ ಯುವಕ ವಿಷ ಸೇವಿಸಿ ಆತ್ಮಹತ್ಯೆ
ಮಂಡ್ಯ, ಫೆ.26: ಮಾಲಕನ ಹಲ್ಲೆಯಿಂದ ಅವಮಾನಕ್ಕೊಳಗಾದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲೂಕಿನ ಹೊಸೂರು ಹುಲ್ಕೆರೆ ಗ್ರಾಮದ ಸಿದ್ದರಾಮೇಗೌಡ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದ ಆನಂದ ಎಂಬಾತನೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ಟಿ.ನರಸೀಪುರ ತಾಲೂಕಿನ ನಂಜುಂಡ ಮತ್ತು ಕಾಳಮ್ಮ ಎಂಬವರು ತಮ್ಮ ಇಬ್ಬರು ಮಕ್ಕಳಾದ ಆನಂದ (22)ಮತ್ತು ಆಕಾಶ್(18) ಎಂಬುವರನ್ನು 2 ವರ್ಷಗಳಿಂದ ಹುಲ್ಲುಕೆರೆಯ ಸಿದ್ದರಾಮೇಗೌಡ ಎಂಬುವರ ಮನೆಯಲ್ಲಿ ಒಂದು ಲಕ್ಷ ರೂ ಹಣಕ್ಕಾಗಿ ಕೆಲಸಕ್ಕೆ ಇರಿಸಿದ್ದರು ಎನ್ನಲಾಗಿದೆ. ಕಳೆದ ಬುಧವಾರ ಆನಂದ್ ರಜೆ ಹಾಕಿದ್ದ. ತನ್ನ ಮಾತು ಕೇಳದೆ ರಜೆ ಹಾಕಿದ್ದ ಎಂಬ ಕಾರಣಕ್ಕೆ ಸಿದ್ದರಾಮೇಗೌಡನ ಮಗ ಸಂದೀಪ ಎಂಬಾತ ಆನಂದನಿಗೆ ಯಾಕೆ ಕೆಲಸಕ್ಕೆ ಬಂದಿಲ್ಲ ಎಂದು ಹಲ್ಲೆ ಮಾಡಿದ್ದ ಎಂದು ಹೇಳಲಾಗಿದೆ.
ಬಳಿಕ, ಫೆ.20ರಂದು ಬುಧವಾರ ತಡರಾತ್ರಿ ವಿಷ ಸೇವಿಸಿ ಒದ್ದಾಡುತ್ತಿದ್ದ ಆನಂದನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿದ್ದಾನೆ.
ಸಿದ್ದರಾಮೇಗೌಡ, ಆತನ ಮಗ ಸಂದೀಪ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಆನಂದನ ಕುಟುಂಬಸ್ಥರು ಹಾಗೂ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.