ಸುಮಲತಾ ಸ್ಪರ್ಧೆಗೆ ನಮ್ಮ ಅಭ್ಯಂತರವಿಲ್ಲ: ಸಚಿವ ಸಿ.ಎಸ್ ಪುಟ್ಟರಾಜು

Update: 2019-02-26 17:58 GMT

ಮಂಡ್ಯ, ಫೆ.26: ಲೋಕಸಭಾ ಚುನಾವಣೆಗೆ ಸುಮಲತಾ ಸೇರಿದಂತೆ ಯಾರೇ ಸ್ಪರ್ಧಿಸಿದರೂ ನಮ್ಮ ಅಭ್ಯಂತರವಿಲ್ಲ. ಯಾರನ್ನೂ ಸ್ಪರ್ಧಿಸದಂತೆ ತಡೆಯೊಡ್ಡುವ ಪ್ರವೃತ್ತಿ, ಸಣ್ಣತನವೂ ಮಾಜಿ ಪ್ರಧಾನಿ ದೇವೇಗೌಡರಲ್ಲಿ ಇಲ್ಲ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಹುರಿಯಾಳುಗಳ ಒತ್ತಡ ಅಧಿಕವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಸ್ಪರ್ಧಿಸುವಂತೆ ಜಿಲ್ಲೆಯೆಲ್ಲೆಡೆ ಒತ್ತಡ ಕೇಳಿಬರುತ್ತಿದ್ದು, ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರವಿದೆ. ಸ್ಥಾನ ಹೊಂದಾಣಿಕೆ ಕುರಿತಂತೆ ಚರ್ಚೆ ಸಾಗಿದೆ. ಸ್ಥಾನ ಹೊಂದಾಣಿಕೆ ನಂತರ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ತಿಳಿದು ಬರಲಿದೆ ಎಂದರು.

ಉಗ್ರರ ವಿಧ್ವಂಸಕ ಕೃತ್ಯದಿಂದ ರಾಷ್ಟ್ರದ 43 ಸೈನಿಕರು ಹುತಾತ್ಮರಾಗಿ 11ನೇ ದಿನಕ್ಕೆ ಸರಿಯಾಗಿ ಪಾಕ್ ಉಗ್ರರನ್ನು ಸದೆಬಡಿಯುವ ಮೂಲಕ ರಾಷ್ಟ್ರದ ಸೈನಿಕರು ನಮ್ಮ ದೇಶದ ಸೈನಿಕ ಬಲವನ್ನು ವಿಶ್ವಕ್ಕೆ ಪ್ರದರ್ಶಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ಈ ಮೂಲಕ ಭಾರತದ ಎದೆಗಾರಿಕೆ ತೋರ್ಪಡಿಸಲಾಗಿದ್ದು, ಇದಕ್ಕಾಗಿ ಶ್ರಮಿಸಿದ ಧೀರಯೋಧರನ್ನು ಜಿಲ್ಲೆಯ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಮಾ.1ರಂದು ಸರಕಾರಿ ಮಹಾವಿದ್ಯಾಲಯದ ಆವರಣದ ಬೃಹತ್ ವೇದಿಕೆಯಲ್ಲಿ ಮಂಗಳೂರಿನ ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಆಗಮಿಸಬೇಕು. ಕಾರ್ಯಕ್ರಮದಲ್ಲಿ ಯೋಧ ಗುರು ಕುಟುಂಬಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ 10 ಲಕ್ಷ ರೂ. ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News