×
Ad

ರೈತರ ಜಮೀನುಗಳಿಗೆ ತೆರಳಿ ಮಾಹಿತಿ ಸಂಗ್ರಹ: ಎಸ್.ಕೆ.ಕಾಂಬೊಜಿ

Update: 2019-02-27 19:59 IST

ಧಾರವಾಡ, ಫೆ.27: ಜಿಲ್ಲಾಡಳಿತ ಹಿಂಗಾರು ಬೆಳೆ ಹಾನಿ ಹಾಗೂ ಬರ ಪರಿಹಾರಗಳ ಕುರಿತು ಪ್ರಸ್ತಾವನೆ, ವರದಿ ಸಲ್ಲಿಸಿದೆ. ನಮ್ಮ ತಂಡವು ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ರೈತರೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆಯುತ್ತಿದೆ ಎಂದು ಕೇಂದ್ರ ಸರಕಾರದ ಜಲಸಂಪನ್ಮೂಲ ಮಂತ್ರಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ.ಕಾಂಬೊಜಿ ತಿಳಿಸಿದರು.

ಬುಧವಾರ ಹುಬ್ಬಳ್ಳಿ ಸರ್ಕ್ಯೂಟ್ ಹೌಸ್‌ನ ಸಭಾಭವನದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆ, ಬಿತ್ತನೆ ಮತ್ತು ಉಂಟಾಗಿರುವ ಬೆಳೆ ನಷ್ಟ ಹಾಗೂ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ತಂಡವು ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ಅಧ್ಯಯನ ಮಾಡಲಿದೆ. ನಂತರ ಎಲ್ಲ ಸಂಗ್ರಹಿತ ಮಾಹಿತಿಯನ್ನು ಸಭೆ ಕರೆದು ಚರ್ಚಿಸಿ, ಮಾರ್ಗಸೂಚಿಗಳ ಅನ್ವಯ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಹಿಂಗಾರು ಬೆಳೆ ನಷ್ಟ ಹಾಗೂ ಕುಡಿಯುವ ನೀರು, ದನಕರುಗಳಿಗೆ ಮೇವು, ನರೇಗಾ ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಅಧ್ಯಯನ ಮಾಡಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ಇಂದು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡಿತು.

ತಂಡದಲ್ಲಿ ಕೇಂದ್ರ ಪಶುಸಂಗೋಪನಾ ಮಂತ್ರಾಲಯದ ಹಿರಿಯ ಅಧಿಕಾರಿ ಡಾ.ತರುಣ್‌ಕುಮಾರ್ ಸಿಂಗ್, ಭಾರತ ಆಹಾರ ನಿಗಮದ ಉಪಪ್ರಧಾನ ವ್ಯವಸ್ಥಾಪಕ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಮಂತ್ರಾಲಯದ ಸತ್ಯಕುಮಾರ್ ಮತ್ತು ದೇವರಾಜ್ ಇದ್ದರು.

ಜಿ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಜಿ.ಕೊರವರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ರಾಮಚಂದ್ರ ಕೆ. ಮಡಿವಾಳರ, ಉಪ ವಿಭಾಗಾಧಿಕಾರಿ ಮುಹಮ್ಮದ್ ಝುಬೇರ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News