×
Ad

ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮತ್ತೊಮ್ಮೆ ದಿಲ್ಲಿಯಲ್ಲಿ ಕನ್ನಡಿಗನ ಧ್ವನಿ ಕೇಳಲಿದೆ: ಸಿಎಂ ಕುಮಾರಸ್ವಾಮಿ

Update: 2019-02-27 21:21 IST

ಮಂಡ್ಯ, ಫೆ.27: ಸಾಲಮನ್ನಾ ಅಪರಾಧವೆಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂಕಷ್ಟದಲ್ಲಿರುವ ರೈತರನ್ನು ಅಪಮಾನಗೊಳಿಸಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರಿಗೆ ಕರೆ ನೀಡಿದ್ದಾರೆ.

ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ಕೂವರೆ ವರ್ಷಗಳು ಬಣ್ಣದ ಮಾತುಗಳನ್ನಾಡಿಕೊಂಡು ಕಾಲ ಕಳೆದ ಪ್ರಧಾನಿ, ಕರ್ನಾಟಕ ಸೇರಿದಂತೆ ಇತ್ತೀಚೆಗೆ ನಡೆದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ವರ್ಷಕ್ಕೆ ಆರು ಸಾವಿರ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಎದುರಾಗದಿದ್ದರೆ ಆರು ಸಾವಿರ ನೀಡುವ ಮನಸ್ಸು ಮಾಡುತ್ತಿರಲಿಲ್ಲ ಎಂದರು.

ರೈತರಿಗೆ ಮೋದಿ ಆರು ಸಾವಿರ ನೀಡುವ ಯೋಜನೆಯಿಂದ ರಾಜ್ಯದ ರೈತರಿಗೆ ದಕ್ಕುವ ಒಟ್ಟು ಮೊತ್ತ 2,098 ಕೋಟಿ ರೂ. ಆದರೆ, ನಾವು ಕೇವಲ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನದ ಮೊತ್ತ 2,500 ಕೋಟಿ ರೂ. ಇಷ್ಟೇ ಅಲ್ಲ, ರೈತರ ಪಂಪ್ ಸೆಟ್‍ಗೆ ನೀಡುತ್ತಿರುವ ಉಚಿತ ವಿದ್ಯುತ್‍ಗೆ ತಗಲುತ್ತಿರುವ ವೆಚ್ಚ 11 ಸಾವಿರ ಕೋಟಿ ರೂ.. ಈ ವ್ಯತ್ಯಾಸವನ್ನು ಗಮನಿಸಿದರೆ ಯಾರು ರೈತರ ಪರ, ಯಾರು ವಿರುದ್ಧ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.

ಸಾಲ ಮನ್ನಾ ಅಪರಾಧವೆಂದು ಪರಿಗಣಿಸುವ ಪ್ರಧಾನಿಗೆ ಇರುವ ರೈತರ ಪರ ಕಾಳಜಿ ಎಷ್ಟಿನ ಮಟ್ಟದ್ದೆಂದು ಸಾಬೀತಾಗಿದೆ. ಆದರೆ, ನಾವು ಚುನಾವಣೆಯಲ್ಲಿ ಘೋಷಿಸಿದಂತೆ ಅಧಿಕಾರಕ್ಕೆ ಬಂದ ತಕ್ಷಣವೇ ರೈತರ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ನಿರ್ಧಾರ ಕೈಗೊಂಡೆವು. ಇದಕ್ಕಾಗಿ 45 ಸಾವಿರ ಕೋಟಿ ವಿನಿಯೋಗಿಸಿದೆವು. ಯಾರ ನಿರ್ಧಾರ ಮಹತ್ವದ್ದು, ಯಾರ ಕಾಳಜಿ ಹೆಚ್ಚಿನದು ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕೆಂದು ಕುಮಾರಸ್ವಾಮಿ ಸಲಹೆ ಇತ್ತರು.

45 ಸಾವಿರ ಕೋಟಿ ಸಾಲ ಮನ್ನಾ ಯೋಜನೆಯಂತೆ ನಿನ್ನೆಯವರೆಗೆ 10 ಲಕ್ಷದ 40 ಸಾವಿರ ರೈತರು ಫಲಾನುಭವಿಗಳಾಗಿ ಲಾಭ ಪಡೆದಿದ್ದಾರೆ. ಉಳಿದ ರೈತರ ಸಾಲ ಮನ್ನಾ ಲಾಭ ಈ ವರ್ಷದ ಅಂತ್ಯದೊಳಗೆ ತಲುಪಲಿದೆ. ಇದಕ್ಕಾಗಿ ಖಜಾನೆಯಲ್ಲಿ 6,400 ಕೋಟಿ ಇಟ್ಟಿರುವುದಾಗಿ ಘೋಷಿಸಿದರು.

ಮತ್ತೊಮ್ಮೆ ದೆಹಲಿಯಲ್ಲಿ ಕನ್ನಡಿಗನ ಧ್ವನಿ: 1996ರಲ್ಲಿ ಕರ್ನಾಟಕದಲ್ಲಿ 16 ಸ್ಥಾನ ಗೆದ್ದಾಗ ದೇವೇಗೌಡರು ಪ್ರಧಾನಿಯಾದರು. ಇವತ್ತು ಅದೇ ರೀತಿಯ ವಾತಾವರಣ ಈ ರಾಜ್ಯದಲ್ಲಿದೆ. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ 20-22 ಸ್ಥಾನ ಗೆಲ್ಲಿಸಿದರೆ ಮತ್ತೊಮ್ಮೆ ದಿಲ್ಲಿಯಲ್ಲಿ ಕನ್ನಡಿಗನ ಧ್ವನಿ ಕೇಳಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ತನ್ನ ತಂದೆ ದೇವೇಗೌಡರು ಪ್ರಧಾನಿಯಾಗಿದ್ದ 10 ತಿಂಗಳ ಅವಧಿಯಲ್ಲಿ ಯಾವುದೇ ಅವಘಡಗಳು ನಡೆದಿಲ್ಲ. ಒಬ್ಬ ಸೈನಿಕನೂ ಬಲಿಯಾಗಿಲ್ಲವೆಂದು ಜನರೇ ಹೇಳುತ್ತಿದ್ದಾರೆ. ಆದರೆ, ಈಗ ಪದೇ ಪದೇ ಇಂತಹ ಭಯೋತ್ಪಾದಕ ಘಟನೆಗಳು ನಡೆಯುತ್ತಿದೆ ಎಂದು ಅವರು ಪರೋಕ್ಷವಾಗಿ ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News