‘ಏರ್ ಸ್ಟ್ರೈಕ್’ ಯಾರೂ ರಾಜಕೀಯಕ್ಕಾಗಿ ಬಳಕೆ ಮಾಡಬಾರದು: ಮಲ್ಲಿಕಾರ್ಜುನ ಖರ್ಗೆ
ಕಲಬುರ್ಗಿ, ಫೆ. 27: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಏರ್ ಸ್ಟ್ರೈಕ್ ಮಾಡಿದ್ದನ್ನು ಯಾರೂ ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳಬಾರದು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿ ನಾನು ಮಾಡಿದ್ದೇನೆಂದು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಕೆ ಮಾಡುವ ಪ್ರಶ್ನೆಯೆ ಇಲ್ಲ. ಸೈನಿಕರು ದಿಟ್ಟವಾಗಿ ಉತ್ತರ ನೀಡಿದ್ದಾರೆಂಬ ಹೆಮ್ಮೆ ನಮಗಿರಬೇಕು. ಅದನ್ನು ಬಿಟ್ಟು ನಾನೇ ಮಾಡಿಸಿದೆ ನಾನೇ ಮಾಡಿಸಿದೆ ಎಂದು ಹೇಳಿಕೊಳ್ಳುವುದು ಸಲ್ಲ ಎಂದು ಮೋದಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
ಪುಲ್ವಾಮಾ ದಾಳಿಯ ನಂತರ ಸೇನಾ ಮುಖ್ಯಸ್ಥರು ಏನೇ ನಿರ್ಧಾರ ಕೈಗೊಳ್ಳಲಿ ನಾವು ಬೆಂಬಲಿಸುತ್ತೇವೆ ಎಂದಿದ್ದೇವೆ. ಅದರಂತೆ ಸರ್ವಪಕ್ಷಗಳು ಸೇನೆಯ ಮುಖ್ಯಸ್ಥರ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿವೆ. ದೇಶದ ಗಡಿಯಲ್ಲಿ ಮತ್ತು ದೇಶದೊಳಗೆ ಇರುವ ಉಗ್ರ ಚಟುವಟಿಕೆ ನಿಗ್ರಹಕ್ಕೆ ಸೇನೆ ಎಂತಹದ್ದೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದರು.