×
Ad

ಸಾಮಾಜಿಕ ನ್ಯಾಯ ಇರುವ ಪಕ್ಷದ ಜೊತೆಗೆ ನಿಲ್ಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-02-27 23:02 IST

ತರೀಕೆರೆ,ಫೆ.27: ಕಾಯಕಗಳು ಜಾತಿಗಳಾಗಿ ಶೋಷಣೆಗೆ ಒಳಗಾಗಿವೆ. ಬಸವಣ್ಣ ಕಂಡ ಸಮಾನತೆಯ ಕನಸು ನನಸಾಗಬೇಕಾದರೆ ಜಾತಿ ಜಾತಿಗಳ ಮಧ್ಯೆ ಮೊದಲು ಸಮಾನತೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ದೇವಾಂಗ ಸಂಘ, ಸಮಾವೇಶ ಸಮಿತಿ ಹಾಗೂ ತರೀಕೆರೆ ತಾಲೂಕು ದೇವಾಂಗ ಸಮಾಜದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ದೇವಾಂಗ ನೇಕಾರ ಬೃಹತ್ ಸಮಾವೇಶದ ಸಮಾರೋಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆ ಬರಬಾರದೆಂಬ ಚಿಂತನೆ ಪಟ್ಟಭದ್ರರಲ್ಲಿದೆ. ಜಾತಿ ವ್ಯವಸ್ಥೆಯ ಕಾರಣಕ್ಕೆ ಶೋಷಣೆಗೆ ಒಳಗಾದ ಸಮುದಾಯಗಳು ನಿರಂತರವಾಗಿ ಇಂತಹ ಸಮಾವೇಶಗಳನ್ನು ಮಾಡುವುದರಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದಾಗಿದೆ. ಸಂಘಟಿತ ಶಕ್ತಿ ಇದ್ರೆ ಮಾತ್ರ ಸಮಸ್ಯೆಗಳು ಬಗೆಹರಿಯಲಿವೆ ಎಂದು ತಿಳಿಸಿದರು.

ಬಸವಣ್ಣರ ವಚನ ಉಚ್ಚರಿಸಿದ ಸಿದ್ದರಾಮಯ್ಯ ರವರು 'ಇವನಾರವ ಇವನಾರವ…ಎಂಬ ಪ್ರಶ್ನೆಯ ಜೊತೆ ಜೊತೆಗೆ ಇವ ನಮ್ಮವ..ಇವ ನಮ್ಮವ…ಎಂಬ ಉತ್ತರಗಳು ಪ್ರತ್ಯೇಕತೆಯನ್ನು ಸಾರುತ್ತವೆ ಎಂದು ವ್ಯಾಖ್ಯಾನಿಸಿದ ಅವರು, ಸಾಮಾಜಿಕ ನ್ಯಾಯ ಯಾವ ಪಕ್ಷದಲ್ಲಿದೆಯೋ ಆ ಪಕ್ಷದ ಜೊತೆಗೆ ನಿಲ್ಲಿ, ಇದು ಈ ಕಾಲದ ಅನಿವಾರ್ಯ ಎಂದು ಹೇಳಿದರು.

ಕೈಮಗ್ಗಗಳು ಬಳಸುವ ಶೇ.25 ರೊಳಗಿನ ವಿದ್ಯುತ್ ದರಕ್ಕೆ ಕೇರಳ ಮಾದರಿಯಲ್ಲಿ ಶೂನ್ಯ ದರ ನಿಗದಿಧಿ ಪಡಿಸುವುದು ಸೇರಿದಂತೆ 50 ಸಾವಿರದೊಳಗಿನ ಸಾಲಮನ್ನಾ ಮಾಡುವಲ್ಲಿ ಅಡ್ಡಿಯಾಗಿರುವ ಷರತ್ತುಗಳನ್ನು ಕೈ ಬಿಡುವಂತೆ ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಜಾತಿಯೋಳಗೆ ಭಾವನಾತ್ಮಕ ವಿಷಯಗಳನ್ನು ತಂದು ಜಾತಿ ಜಾತಿ ಮಧ್ಯೆ ಬೆಂಕಿ ಹಾಕುವ ಜನರಿದ್ದು, ನೇಕಾರ ಸಮಾಜದ ಎಲ್ಲಾ ಒಳ ಪಂಗಡಗಳು ಸೇರಿ ನಾವೆಲ್ಲ ಒಂದೇ ಎಂಬ ಭಾವನೆ ನಮಗೆ ಬರಬೇಕಿದೆ ಎಂದು ಹೇಳಿದರು. ನೇಕಾರಿಕೆಯನ್ನು ಸರ್ಕಾರಗಳು ಪ್ರೋತ್ಸಾಹಿಸಿ ಬೆಳೆಸಿದರೆ ಜನರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ. ಈ ಬಾರಿ ಬಜೆಟ್ ನಲ್ಲಿ ನೇಕಾರರ ಬಗ್ಗೆ ಪ್ರಸ್ತಾಪವಿಲ್ಲ. ಮುಂದಿನ ಮಧ್ಯಂತರ ಬಜೆಟ್ ನಲ್ಲಿಯಾದರೂ ಅನುದಾನ ಒದಗಿಸಲಿ ಎಂದು ಒತ್ತಾಯಿಸಿದರು.

ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯರವರು ನೇಕಾರ ಕೂಲಿ ಕಾರ್ಮಿಕರಿಗೆ ಸರ್ಕಾರಕ್ಕೆ ಹೇಳಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಸರ್ಕಾರದಲ್ಲಿ ನಾವು ಈಗ ಇಲ್ಲದ ಕಾರಣ ನಾವು, ಸಮಾಜ, ವೃತ್ತಿಗಳು ಅನಾಥವಾಗಿವೆ. ನೇಕಾರರಿಗೆ ರಾಜಕೀಯ ಶಕ್ತಿ ನೀಡಿದ್ದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರು ಎಂದು ಹೇಳಿದರು.

ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿ, ನೇಕಾರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಸಂಘಟಿತರಾಗಿ ತಮ್ಮ ಹಕ್ಕುಗಳ ಕೇಳುವಲ್ಲಿ ನೇಕಾರ ಸಮಾವೇಶವು ಯಶಸ್ಸನ್ನು ಕಂಡಿದೆ ಎಂದು ತಿಳಿಸಿದರು.

ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವಿಂದ್ರ ಪಿ.ಕಲಬುರ್ಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಸವಲತ್ತುಗಳು ಲಭ್ಯವಾಗಿದ್ದು, ಶೇ.2 ರಷ್ಟು ಒಳ ಮೀಸಲಾತಿಯನ್ನು ಸರ್ಕಾರ ನೇಕಾರರಿಗೆ ನೀಡಲಿ ಎಂದು ಆಗ್ರಹಿಸಿದರು.

ಹಂಪೆ ಹೇಮಕೂಟ ಗಾಯತ್ರಿ ಪೀಠದ ಪೀಠಾಧ್ಯಕ್ಷರಾದ ಶ್ರೀ ದಯಾನಂದ ಪುರಿಸ್ವಾಮಿ ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಯಶೋದಮ್ಮ, ಮಾಜಿ ಶಾಸಕರಾದ ಎಸ್.ಎಂ.ನಾಗರಾಜು, ಟಿ.ಎಚ್.ಶಿವಶಂಕರಪ್ಪ, ಜಿ.ಎಚ್.ಶ್ರೀನಿವಾಸ್, ಗಾಯತ್ರಿ ಶಾಂತೆಗೌಡ, ಎಂ.ಡಿ.ಲಕ್ಷ್ಮಿ ನಾರಾಯಣ ಹಾಗೂ ತಾಲೂಕಿನ ಅನೇಕ ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News