ಅಭಿವೃದ್ಧಿ ಕಾರ್ಯಗಳಿಗೆ ನನ್ನಷ್ಟು ಅನುದಾನ ಯಾರೂ ತಂದಿಲ್ಲ: ಸಂಸದ ಪ್ರತಾಪ್ ಸಿಂಹ

Update: 2019-02-27 17:51 GMT

ಮಡಿಕೇರಿ, ಫೆ.27: ಕರ್ನಾಟಕ ರಾಜ್ಯದ 39 ಪ್ರತಿನಿಧಿಗಳು ಲೋಕಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ನಾನು ತಂದಿರುವಷ್ಟು ಅನುದಾನವನ್ನು ಬೇರೆ ಯಾವುದೇ ಸಂಸದರು ತಂದಿಲ್ಲವೆಂದು ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತನಗಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು ಅಥವಾ ಅನುದಾನ ತಂದ ಸಂಸದರು ಬೇರೊಬ್ಬರಿಲ್ಲ ಎಂದು ತಿಳಿಸಿದರು.

ಕೊಡಗಿನಲ್ಲಿ ತಾಲೂಕು ಪಂಚಾಯತ್‍ನಿಂದ ಶಾಸಕರವರೆಗೆ ಎಲ್ಲರೂ ಬಿಜೆಪಿ ಪಕ್ಷದವರೆ ಆಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೇಂದ್ರ ರಸ್ತೆ ನಿಧಿಯಿಂದ ಕೊಡಗಿಗೆ 34 ಕೋಟಿ ರೂ.ಅನುದಾನ ಬಂದಿದ್ದು, ರಸ್ತೆ-ಸೇತುವೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ಪ್ರಧಾನಿ ಮೋದಿಯವರ ಉಜ್ವಲ ಯೋಜನೆಯಡಿ ಕೊಡಗು-ಮೈಸೂರಿನ 20 ಸಾವಿರ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸೌಲಭ್ಯ ನೀಡಲಾಗಿದೆ. ರಾಜ್ಯದಲ್ಲಿ ರೈಲು ಸಂಪರ್ಕವಿಲ್ಲದ ಏಕೈಕ ಜಿಲ್ಲೆ ಕೊಡಗು ಎಂಬ ಕೊರಗನ್ನು ದೂರ ಮಾಡಲು ಕುಶಾಲನಗರದವರೆಗೆ ರೈಲು ಸಂಪರ್ಕಕ್ಕೆ ಕೇಂದ್ರದಿಂದ ಅನುಮೋದನೆ ಕೊಡಿಸಿರುವುದಾಗಿ ತಿಳಿಸಿದ ಪ್ರತಾಪ್ ಸಿಂಹ, ಈ ಯೋಜನೆ ಸಾಕಾರಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಕೃತಿ ವಿಕೋಪದ ಸಂದರ್ಭ ಬಡ ವರ್ಗದ ಜನರಿಗೆ ಕೇಂದ್ರ ಸರ್ಕಾರದಿಂದ ತಕ್ಷಣದಲ್ಲಿ ಪರಿಹಾರ ನೀಡಲಾಗಿದ್ದು, ರಾಜ್ಯ ಸರ್ಕಾರದಿಂದ ಅನುದಾನವನ್ನು ಕೊಡಿಸುವಲ್ಲಿ ನಮ್ಮ ಹೋರಾಟ ಸಫಲವಾಗಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು. ಕೊಡಗು-ಮೈಸೂರು ಕ್ಷೇತ್ರದದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕೊಡಗಿನ ಜನರು ಎಂದಿಗೂ ನಮ್ಮ ಕೈಬಿಡುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎನ್ನುವ ಕನಸು ಪ್ರತಿಯೊಬ್ಬರಲ್ಲಿದ್ದು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಮಾರ್ಚ್ 2ರಂದು ಜಿಲ್ಲೆಯಲ್ಲಿ ಬಿಜೆಪಿ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಮಾ.16 ರಂದು ಬಿಜೆಪಿ ರಾಜ್ಯಾಧ್ಯಕ್ಷರ ಜಿಲ್ಲಾ ಭೇಟಿ ಕಾರ್ಯಕ್ರಮ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಬಿನ್ ದೇವಯ್ಯ, ರವಿ ಕುಶಾಲಪ್ಪ, ಬಾಲಚಂದ್ರ ಕಳಗಿ, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ರಾಜ್ಯ ಸಮಿತಿ ಸದಸ್ಯೆ ರೀನಾಪ್ರಕಾಶ್, ಕಾಂಗಿರ ಸತೀಶ್, ಲೋಕೇಶ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News