ದಾವಣಗೆರೆ: ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ದಾವಣಗೆರೆ,ಫೆ.27: ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಯ ವಿವಿಧ ಬರ ಪೀಡಿತ ಪ್ರದೇಶಗಳಾದ ದಾವಣಗೆರೆ ತಾಲೂಕಿನ ಅಣಜಿ ಮತ್ತು ಬೋರಗೊಂಡನಹಳ್ಳಿ ಗ್ರಾಮ, ಜಗಳೂರು ತಾಲೂಕಿನ ಉದ್ದಗಟ್ಟ, ಭರಮಸಮುದ್ರ, ರಂಗಾಪುರ, ಬಿಳಿಚೋಡು ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿತು.
ಈ ವೇಳೆ ರೈತರು ಹನಿ ನೀರಿಗೂ ಪರದಾಡುತ್ತಿರುವುದು, ದನ-ಕರುಗಳಿಗೆ ಮೇವು ಇಲ್ಲದಿರುವುದು, ಬೆಳೆ ವಿಮೆ ಬಾರದಿರುವುದು, ಬೆಳೆ ಹಾನಿ ಸೇರಿದಂತೆ ಹಲವು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.
ಉದ್ದಗಟ್ಟ ಗ್ರಾಮದ ಬಳಿಯಲ್ಲಿರುವ ಶ್ರೀಓಂಕಾರೇಶ್ವರ ಮಠದ 4 ಎಕರೆ 11 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಬಿಳಿಜೋಳದ ಹೊಲಕ್ಕೆ ಭೇಟಿ ನೀಡಿದ ಬರ ಅಧ್ಯಯನ ತಂಡ, ರೈತರಿಂದ ಮಾಹಿತಿ ಪಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರೇವಣಸಿದ್ದಪ್ಪ, ಚಿರಂಜೀವಿ, ಮಂಜುನಾಥ್, ಸಂಗಪ್ಪ ಮತ್ತಿತರರು, ಕುಡಿಯುವ ನೀರಿಗಾಗಿ ಪರದಾಡಬೇಕಾದ ಸಮಸ್ಯೆ ಇದ್ದು, ಮಹಿಳೆಯರು ಮಕ್ಕಳನ್ನು ಬಿಟ್ಟು ಬೆಳಗಿನ ಜಾವ 5.30 ರಿಂದಲೇ ನೀರಿಗಾಗಿ ಬಿಂದಿಗೆ ಹಿಡಿದು, ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಂದರು.
ಕಳೆದ ಎರಡೂ ವರ್ಷಗಳಿಂದಲೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಕ್ಲೈಮ್ ಕಟ್ಟಿದ್ದೇವೆ. ಆದರೆ, ಎರಡೂ ವರ್ಷಗಳು ಸಹ ಬೆಳೆ ವಿಮೆ ಬಂದಿಲ್ಲ ಎಂದು ಅಳಲು ತೋಡಿಕೊಂಡರು.
ಇದೇ ವೇಳೆ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಗಳೂರು ತಾಲೂಕಿನಲ್ಲಿ 225 ಹೆಕ್ಟೇರ್ ಹಾಗೂ ಜಿಲ್ಲೆಯಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ. ಆದರೆ, ಹಿಂಗಾರು ಮಳೆ ಕೈಕೊಟ್ಟಿರುವ ಕಾರಣ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ರೈತ ಶರಣಪ್ಪ ಎಂಬವರ 4 ಎಕರೆ 6 ಗುಂಟೆಯಲ್ಲಿ ಅಡಿಕೆ ಬೆಳೆದಿರುವ ತೋಟಕ್ಕೆ ಭೇಟಿ ನೀಡಿದ ಅಧ್ಯಯನ ತಂಡವು ಒಣಗಿದ ಅಡಿಕೆ ಗಿಡಗಳನ್ನು ಕಂಡು, ಅಲ್ಲಿಯೇ ಸಮೀಪದ ತೋಟದಲ್ಲಿರುವ ಹಸಿರು ಇರುವ ಗಿಡಗಳನ್ನು ಗಮನಿಸಿ, ಇಲ್ಲಿ ಅಡಿಕೆ ಗಿಡ ಒಣಗಿವೆ. ಆದರೆ, ಆ ಮರಗಳು ಏಕೆ ಹಸಿರಾಗಿವೆ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ರೈತ ಬೆಳೆ ಒಣಗಿರುವುದು 13 ವರ್ಷಗಳ ಗಿಡಗಳಾಗಿವೆ. ಮಳೆ ಸರಿಯಾಗಿ ಆಗದ ಕಾರಣ ಹಾಗೂ ಕೊಳವೆಬಾವಿಯಲ್ಲಿ ನೀರು ಬತ್ತಿ ಹೋಗಿರುವ ಕಾರಣ ಅಡಿಕೆ ಗಿಡಗಳು ಒಣಗಿವೆ. ಹಸಿರು ಇರುವ ಗಿಡಗಳು 8 ವರ್ಷದವಾಗಿದ್ದು, ಆ ಗಿಡಗಳಿಗೆ ಟ್ಯಾಂಕರ್ ಮೂಲಕ ಕೃಷಿ ಹೊಂಡಕ್ಕೆ ನೀರು ಹಾಕಿಸಿ, ಗಿಡಗಳನ್ನು ಬದುಕಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ಹಸಿರಾಗಿವೆ. ಆದರೆ, ನಮಗೆ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸುವ ಶಕ್ತಿ ಇಲ್ಲ ಹಾಗೂ ಕೊಳವೆ ಬಾವಿ ಕೊರೆಸೋಣ ಎಂದರೆ, ಸಾವಿರ ಅಡಿಯ ವರೆಗೂ ಡ್ರಿಲ್ಲಿಂಗ್ ಮಾಡಿಸಿದರೂ ನೀರು ಬರುವುದಿಲ್ಲ ಎಂದು ಸಮಸ್ಯೆಯನ್ನು ಎಳೆ, ಎಳೆಯಾಗಿ ವಿವರಿಸಿದರು.
ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮಾತನಾಡಿ, ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಬರಪೀಡಿತ ಪ್ರದೇಶಗಳನ್ನು ತೋರಿಸುತ್ತಿದ್ದು, ಈ ವೇಳೆ ತಂಡವು ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಕರ್ನಾಟಕದ ಸಮಗ್ರ ಚಿತ್ರಣ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಕೇಂದ್ರ ಸರ್ಕಾರದ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಅಭಿಲಾಕ್ಷ್ ಲಿಖಿ ಅವರ ನೇತೃತ್ವದ ಈ ಜಿಪಂ ಸಿಇಒ ಹೆಚ್.ಬಸವರಾಜೇಂದ್ರ, ಉಪ ವಿಭಾಗಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಜಗಳೂರು ತಹಶೀಲ್ದಾರ್ ತಿಮ್ಮಣ್ಣ ಹುಲ್ಮನಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಸೇರಿದಂತೆ ಅನೇಕರು ಇದ್ದರು.