ಕ್ರೈ ದಿ ಬಿಲವ್‌ಡ್ ಕಂಟ್ರಿ

Update: 2019-02-27 18:44 GMT

ನ್ಯಾಯ ಎಂಬುದು ನಮ್ಮ ಮನಸ್ಸುಗಳಲ್ಲಿರುವ ಕೊಳೆಯನ್ನು, ಕಳಂಕವನ್ನು ದೂರೀಕರಿಸಿ ನಮ್ಮದೇ ಬದುಕಿನಲ್ಲಿರುವ ತಾರತಮ್ಯ ಹಾಗೂ ಆಚರಣೆಗಳನ್ನು ನಾಶಗೊಳಿಸುವುದಾಗಿದೆ. ಈ ಮೂಲಕ ನಾವು ನಮ್ಮ ಸಹ ಜೀವಿಗಳಿಗೆ, ನಮ್ಮ ಜತೆ ಬದುಕುವ ಸಹೋದರ ಸಹೋದರಿಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನ್ಯಾಯವೆಂದರೆ ಅದು ವಕೀಲರ ಮತ್ತು ನ್ಯಾಯಾಧೀಶರ ನ್ಯಾಯಾಲಯಗಳ ಕುರಿತಾದಷ್ಟೇ ಅಲ್ಲ. ಅದು ನಮ್ಮ ಕುರಿತಾದದ್ದು ಕೂಡ ಹೌದು.


ಹಲವು ವರ್ಷಗಳ ಹಿಂದೆ ನಾನೊಂದು ಪುಸ್ತಕ ಓದಿದೆ. ಗಾಢವಾಗಿ ಕಾಡುವ ಆ ಪುಸ್ತಕದ ಶೀರ್ಷಿಕೆ ‘‘ಕ್ರೈ ದಿ ಬಿಲವ್‌ಡ್ ಕಂಟ್ರಿ’’ (ನನ್ನ ಪ್ರಿಯ ದೇಶವೇ ಅಳು). ಶೀರ್ಷಿಕೆಗೆ ಸರಿ ಹೊಂದುವ ವಸ್ತು ಅದರ ತಿರುಳು. ಆ ಕಾಲದ ಪ್ರಸಿದ್ಧ ಲೇಖಕ ಅಲನ್ ಪ್ಯಾಟನ್ ಬರೆದ ಆ ಪುಸ್ತಕ ವರ್ಣ ದ್ವೇಷ ನೀತಿಯ ಯುಗದ ದಕ್ಷಿಣ ಆಫ್ರಿಕಾದ ಸನ್ನಿವೇಶದಲ್ಲಿ ನಡೆಯುವ ಘಟನೆಗಳನ್ನು ಹೇಳುತ್ತದೆ. ಆದರೆ ಅದು ಭಾರತದಲ್ಲೂ ನಡೆಯಬಹುದಾದ, ಭಾರತದ ಸನ್ನಿವೇಶಕ್ಕೂ ಹೊಂದಬಹುದಾದ ಘಟನಾವಳಿಗಳನ್ನು ಹೊಂದಿರುವ ಪುಸ್ತಕ. ನಾನು ಪ್ರತಿ ಬಾರಿ ವರ್ತಮಾನ ಪತ್ರಿಕೆಯನ್ನು ತೆರೆದಾಗಲೂ ನ್ಯಾಯವನ್ನು ನಿರಾಕರಿಸಲಾದ ಒಬ್ಬರಲ್ಲಿ ಒಬ್ಬರ ಕತೆ ಅಲ್ಲಿರುತ್ತದೆ ಅಥವಾ ಅದು ವರ್ಷಗಳ ಕಾಲ, ದಶಕಗಳ ಕಾಲ ಕೂಡ ನ್ಯಾಯಕ್ಕಾಗಿ ಹೋರಾಡುತ್ತಿರುವವರ ಕತೆ ಆಗಿರುತ್ತದೆ.

1948ರ ದೊಂಬಿಗಳಲ್ಲಿ ಯಾತನೆೆಗೊಳಗಾದ ನನ್ನ ಹಲವಾರು ಸಿಖ್ ಗೆಳೆಯರು ನೆನಪಾಗುತ್ತಾರೆ. ಆಗ ಪ್ರಭುತ್ವಕ್ಕೆ ಲಭ್ಯವಿದ್ದ ಎಲ್ಲ ಶಕ್ತಿ ಮತ್ತು ಎಲ್ಲ ಅಸ್ತ್ರಗಳನ್ನು ಬಳಸಿಕೊಂಡು ಪೊಲೀಸರು ಮತ್ತು ಇತರರು ಖಲಿಸ್ತಾನ್ ಚಳವಳಿಯನ್ನು ಹತ್ತಿಕ್ಕಲು ನಡೆಸಿದ ಅತಿರೇಕಗಳಿಂದ ನರಳಿದವರು ಅವರು. ಸಂತ್ರಸ್ತರಾದ ಹಲವಾರು ಜನಸಾಮಾನ್ಯರ ಗೋಳುಗಳನ್ನು ಯಾರೂ ಕೇಳುವವರಿಲ್ಲ; ಅಥವಾ ಅವರ ರಕ್ಷಣೆ ಬರುವವರು ಯಾರೂ ಇರಲಿಲ್ಲ.

ಒಬ್ಬ ಮನುಷ್ಯ ನ್ಯಾಯಕ್ಕಾಗಿ ಹೋರಾಡಿ ನ್ಯಾಯ ಪಡೆಯಲು ಸೋತಾಗ ಆ ವ್ಯಕ್ತಿಯ ಒಳಗೆ ಏನೋ ಒಂದು ಮುರಿದು ಬಿದ್ದಂತಾಗುತ್ತದೆ. ನ್ಯಾಯ ಮತ್ತು ಕಾನೂನಿನ (ರೂಲ್ ಆಫ್ ಲಾ) ಪರಿಕಲ್ಪನೆಗಳು ಕೇವಲ ಪಠ್ಯ ಪುಸ್ತಕದ ಒಳಗಿನ ವಿಷಯಗಳಲ್ಲ; ನಿರೂಪಕರಿಗೆ ಮತ್ತು ನಾಯಕರಿಗೆ ಮಾತ್ರ ಸಂಬಂಧಿಸಿದ ಶುಲ್ಕ ಸಂಗತಿಗಳಲ್ಲ. ಅವುಗಳು ಸಹಜವಾಗಿ ಭಾವನೆಗಳಿಂದ, ಭರವಸೆ ಮತ್ತು ನ್ಯಾಯ ಸಿಗಬೇಕೆಂಬ ಆಸೆಯಿಂದ ತುಂಬಿರುವ ವಿಷಯಗಳು. ಪ್ರತಿ ಬಾರಿ ಒಂದು ತಪ್ಪು ನಡೆದಾಗ, ಪ್ರತಿ ಬಾರಿ ನ್ಯಾಯ ನಿರಾಕರಿಸಲ್ಪಟ್ಟಾಗ ವ್ಯವಸ್ಥ್ಥೆಯಲ್ಲಿ ಮತ್ತು ಆ ವ್ಯವಸ್ಥೆಯಲ್ಲಿರುವ ಜನರ ರಕ್ಷಣೆ ಮಾಡುವಲ್ಲಿ ವ್ಯವಸ್ಥೆ ತೋರುವ ಆಸಕ್ತಿಯಲ್ಲಿ ಜನರಿಗಿರುವ ವಿಶ್ವಾಸ ಕೆಲವು ಸೆಂಟಿಮೀಟರ್‌ಗಳಷ್ಟು ಕಡಿಮೆಯಾಗುತ್ತದೆ. ಕ್ರಮೇಣ, ಸಮಯ ಕಳೆದಂತೆ ಮೀಟರ್‌ಗಳಷ್ಟು ಮತ್ತು ಕಿಲೋಮೀಟರ್‌ಗಳಷ್ಟು ಕಡಿಮೆಯಾಗುತ್ತದೆ. ಅಂತಿಮವಾಗಿ, ಜನರ ವಿಶ್ವಾಸ ಕಳೆದುಕೊಂಡ ಅಂತಹ ಒಂದು ವ್ಯವಸ್ಥೆ ಮತ್ತು ಜನರ ನಡುವಿನ ದೂರ, ಕಂದಕ ತುಂಬಿಸಲಾರದಷ್ಟು ಅಗಲವಾಗುತ್ತದೆ. ವ್ಯವಸ್ಥೆ ಮತ್ತು ಜನರ ನಡುವಿನ ಸಂಧಾನದ ನಡಿಗೆ ನಿಜವಾಗಿಯೂ ತುಂಬ ದೀರ್ಘವಾದ ನಡಿಗೆ; ಈ ಅಂತರವನ್ನು ತುಂಬಲು ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುವ ಓರ್ವ ಮುುತ್ಸದ್ದಿ ಬೇಕಾಗುತ್ತಾನೆ. ಕುಬ್ಜ್ಬರು ತುಂಬಿರುವ ಒಂದು ದೇಶದಲ್ಲಿ ಇಂತಹ ಎತ್ತರದ, ಉನ್ನತ ವ್ಯಕ್ತಿತ್ವದ ಮುತ್ಸದ್ದಿಗಳು ಅಪರೂಪ.

ನ್ಯಾಯ ಎಂಬುದು ಎಲ್ಲರನ್ನೂ ಒಳಗೊಳ್ಳುವ (ಇನ್‌ಕ್ಲೂಸಿವ್) ಒಂದು ಸಮಾಜಕ್ಕಾಗಿ, ಒಂದು ವ್ಯವಸ್ಥೆಗಾಗಿ ನಡೆಸುವ ಹುಡುಕಾಟವೂ ಹೌದು. ಅಂತಹ ಒಂದು ಸಮಾಜದಲ್ಲಿ ಶಿಕ್ಷೆಯ ಭಯವನ್ನು ಕಡಿಮೆ ಮಾಡುವುದರ ಜತೆಗೆ, ಅಂತಿಮವಾಗಿ ಯಾರೂ ಕೂಡ ಸಮಾಜದ ಪರಿಧಿಯ ಹೊರಗೆ ಉಳಿಯದಂತೆ, ಯಾರೂ ಹಿಂದೆ ಉಳಿಯದಂತೆ (ಪ್ರತಿಯೊಬ್ಬನೂ ಸಮಾಜದ ಪ್ರಧಾನ ಧಾರೆಯಲ್ಲಿ ಸೇರಿಕೊಳ್ಳುವಂತೆ) ನೋಡಿಕೊಳ್ಳಬೇಕಾಗುತ್ತದೆ ಮತ್ತು ಹೀಗೆ ನೋಡಿಕೊಳ್ಳುವುದು ತುಂಬ ಮುಖ್ಯವೂ ಆಗುತ್ತದೆ. ಹಾಗೆಯೇ, ನ್ಯಾಯ ಎಂಬುದು ನಮ್ಮ ಮನಸ್ಸುಗಳಲ್ಲಿರುವ ಕೊಳೆಯನ್ನು, ಕಳಂಕವನ್ನು ದೂರೀಕರಿಸಿ ನಮ್ಮದೇ ಬದುಕಿನಲ್ಲಿರುವ ತಾರತಮ್ಯ ಹಾಗೂ ಆಚರಣೆಗಳನ್ನು ನಾಶಗೊಳಿಸುವುದಾಗಿದೆ. ಈ ಮೂಲಕ ನಾವು ನಮ್ಮ ಸಹ ಜೀವಿಗಳಿಗೆ, ನಮ್ಮ ಜತೆ ಬದುಕುವ ಸಹೋದರ ಸಹೋದರಿಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನ್ಯಾಯವೆಂದರೆ ಅದು ವಕೀಲರ ಮತ್ತು ನ್ಯಾಯಾಧೀಶರ ನ್ಯಾಯಾಲಯಗಳ ಕುರಿತಾದಷ್ಟೇ ಅಲ್ಲ. ಅದು ನಮ್ಮ ಕುರಿತಾದದ್ದು ಕೂಡ ಹೌದು.

ಕಾನೂನು ವಿದ್ಯಾರ್ಥಿಯಾಗಿರುವ ಶಾಹಿಸ್ತಾ ಪರ್ವೀನ್ ತನ್ನ ಇತ್ತೀಚಿನ ಬ್ಲಾಗ್‌ನಲ್ಲಿ, ಒಬ್ಬಳು ಭಿನ್ನ ಸಾಮರ್ಥ್ಯದ ವ್ಯಕ್ತಿಯಾಗಿ ತಾನು ಒರಿಸ್ಸಾ ಹೈಕೋರ್ಟ್‌ನಲ್ಲಿ ತರಬೇತಿ(ಇಂಟರ್ನ್‌ಶಿಪ್) ಪಡೆಯಲು ತೆರಳಿದಾಗ ತಾನು ಅನುಭವಿಸಿದ ತಾರತಮ್ಯದ ಬಗ್ಗೆ ಬರೆದಿದ್ದಾಳೆ. ಸ್ವತಃ ಒಬ್ಬಳು ಕಾನೂನಿನ ವಿದ್ಯಾರ್ಥಿಯಾಗಿ ಆಕೆ ನ್ಯಾಯಾಲಯದಲ್ಲೇ ಅನುಭವಿಸಿದ ತಾರತಮ್ಯದ ವಿವರವನ್ನು ಓದುವಾಗ ನನಗೆ ದುಃಖವಾಗುತ್ತದೆ. ಹಾಗೆಯೇ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯ ಬಳಿಕ ಕಾಶ್ಮೀರಿಗಳ ಮೇಲೆ ನಡೆದ ದಾಳಿಯಿಂದ ಕೂಡ ನನಗೆ ದುಃಖವಾಗುತ್ತದೆ. ನಮ್ಮ ಯೋಧರ ಮೇಲೆ ಉಗ್ರರು ದಾಳಿ ನಡೆಸಿದರು ಮತ್ತು ಈ ದಾಳಿಯನ್ನು ಒಂದು ನೆರೆಯ ರಾಷ್ಟ್ರ ಪ್ರಾಯೋಜಿಸಿತ್ತು ಎನ್ನುವುದು ಅಧಿಕೃತ ಕಥಾನಕ, ಅಧಿಕೃತ ಮಾಹಿತಿ. ಆದರೆ ಭಾರತದ ನಾಗರಿಕರಾಗಿರುವ ಹಾಗೂ ಸಾಂಪ್ರದಾಯಿಕ ವಿಧಾನಗಳ ಮೂಲಕ ತಮ್ಮ ಹೊಟ್ಟೆಪಾಡನ್ನು ಸಂಪಾದಿಸಿ ಬದುಕುತ್ತಿರುವ ಕಾಶ್ಮೀರಿಗಳ ಮೇಲೆ ನಡೆದಿರುವ ಪ್ರತೀಕಾರ ದಾಳಿಗಳಲ್ಲಿ ಯಾವ ತರ್ಕವೂ ಇಲ್ಲ. ಆದರೆ ತರ್ಕ ಮತ್ತು ವಿಚಾರಶೀಲತೆ ಎನ್ನುವ ಶಬ್ದಗಳ ಕಾಲ ಪ್ರಾಯಶಃ ಆಗಿ ಹೋಗಿದೆ. ನಾವು ಗ್ರಹಣ ಹಿಡಿದ ಕತ್ತಲು ಆವರಿಸಿರುವ ಬಿಂದು ಬೆಳಕಿನ ನೆರಳುಗಳಲ್ಲಿ ಬದುಕುತ್ತಿದ್ದೇವೆ.
(ಶಂತನುದತ್ತ ವಾಯುಸೇನೆಯ ಓರ್ವ ಮಾಜಿ ವೈದ್ಯ ಮತ್ತು ಕಳೆದ 50 ವರ್ಷಗಳಿಂದ ಓರ್ವ ಅಭಿವೃದ್ಧಿ ಕಾರ್ಯಕರ್ತ)

ಕೃಪೆ: countercurrents.org

Writer - ಶಂತನು ದತ್ತ

contributor

Editor - ಶಂತನು ದತ್ತ

contributor

Similar News