ದಾವಣಗೆರೆ ಜಿ.ಪಂ: ಅಧ್ಯಕ್ಷರಾಗಿ ಶೈಲಜಾ ಬಸವರಾಜ್, ಉಪಾಧ್ಯಕ್ಷರಾಗಿ ಸುರೇಂದ್ರ ನಾಯ್ಕ ಅವಿರೋಧ ಆಯ್ಕೆ
ದಾವಣಗೆರೆ,ಫೆ,28: ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಾಡ ಜಿಪಂ ಕ್ಷೇತ್ರದ ಸದಸ್ಯೆ ಶೈಲಜಾ ಬಸವರಾಜ್ ಅಧ್ಯಕ್ಷರಾಗಿ ಹಾಗೂ ಬೇಲಿಮಲ್ಲೂರು ಜಿಪಂ ಕ್ಷೇತ್ರದ ಸದಸ್ಯ ಸುರೇಂದ್ರ ನಾಯ್ಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ್ ಬೆಳಿಗ್ಗೆ 11ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಮೊದಲಿಗೆ ನಾಮಪತ್ರಗಳನ್ನು ಪರಿಶೀಲಿಸಿದರು. ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬಾಡ ಕ್ಷೇತ್ರದ ಸದಸ್ಯೆ ಶೈಲಜಾ ಬಸವರಾಜ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಸದಸ್ಯರಾದ ಎನ್.ಜಿ ನಟರಾಜ್ ಮತ್ತು ಮಂಜುಳಾ ಟಿ.ವಿ.ರಾಜು ಇವರು ಸೂಚಕರಾಗಿದ್ದರು.
ನಾಮಪತ್ರಗಳು ಕ್ರಮಬದ್ಧವಾಗಿತ್ತು. ನಾಮಪತ್ರ ಹಿಂತೆಗೆದುಕೊಳ್ಳಲು ಎರಡು ನಿಮಿಷ ಕಾಲಾವಧಿ ನೀಡಿದ್ದ ಚುನಾವಣಾಧಿಕಾರಿಗಳು, ಅಧ್ಯಕ್ಷರ ಸ್ಥಾನದ ಅಭ್ಯರ್ಥಿಯು ನಾಮಪತ್ರ ಹಿಂಪಡೆಯದ ಕಾರಣ ಏಕೈಕ ಅಭ್ಯರ್ಥಿ ಜಿಪಂ ಅಧ್ಯಕ್ಷರಾಗಿ ಶೈಲಜಾ ಬಸವರಾಜ್‍ರ ಹೆಸರನ್ನು ಘೋಷಿಸಿದರು. ಜಿಪಂ ಉಪಾಧ್ಯಕ್ಷರ ಸ್ಥಾನಕ್ಕೆ ಬೇಲಿಮಲ್ಲೂರು ಕ್ಷೇತ್ರದ ಸದಸ್ಯ ಸುರೇಂದ್ರ ನಾಯ್ಕ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಸದಸ್ಯರಾದ ಎಂ.ಆರ್.ಮಹೇಶ್ ಮತ್ತು ದೀಪಾ ಜಗದೀಶ್ ಇವರು ಸೂಚಕರಾಗಿದ್ದರು. ನಾಮಪತ್ರಗಳು ಕ್ರಮಬದ್ಧವಾಗಿದ್ದು, ನಾಮಪತ್ರ ಹಿಂತೆದುಕೊಳ್ಳಲು ಎರಡು ನಿಮಿಷ ಕಾಲಾವಧಿ ನೀಡಿದ್ದ ಚುನಾವಣಾಧಿಕಾರಿಗಳು ಉಪಾಧ್ಯಕ್ಷರ ಸ್ಥಾನದ ಅಭ್ಯರ್ಥಿ ನಾಮಪತ್ರ ಹಿಂಪಡೆಯದ ಕಾರಣ ಏಕೈಕ ಅಭ್ಯರ್ಥಿ ಜಿ.ಪಂ ಉಪಾಧ್ಯಕ್ಷರಾಗಿ ಸುರೇಂದ್ರ ನಾಯ್ಕರ ಹೆಸರನ್ನು ಘೋಷಿಸಿದರು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಾಲಾವಧಿ ಫೆ.28 ರಿಂದ 2021 ರ ಮೇ 2 ರವರೆಗಿನ ಸೀಮಿತ ಅವಧಿವರೆಗೆ ಇರುತ್ತದೆ ಎಂದು ಹೇಳಿದ ಅವರು ಗಡಿ ಪ್ರದೇಶದಲ್ಲಿನ ಸೂಕ್ಷ್ಮ ವಾತಾವರಣದ ಹಿನ್ನೆಲೆಯಲ್ಲಿ ಶಾಂತಿ ರೀತಿಯಲ್ಲಿ ಸಂಭ್ರಮಾಚರಣೆ ನಡೆಸುವಂತೆ ತಿಳಿಸಿ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಅಧಿಕಾರ ವಹಿಸಿಕೊಂಡ ಅಧ್ಯಕ್ಷೆ ಶೈಲಜಾ ಬಸವರಾಜ್ ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರಿನೊಂದಿಗೆ ನೈರ್ಮಲ್ಯಕ್ಕೂ ಹೆಚ್ಚಿನ ಒತ್ತು ನೀಡಲಾಗುವುದು. ಗ್ರಾಮೀಣ ಭಾಗದಲ್ಲಿ ಒಳಚರಂಡಿ(ಯುಜಿಡಿ)ವ್ಯವಸ್ಥೆ ಕಡೆ ಗಮನ ಹರಿಸಲಾಗುವುದು. ಒಳ ಚರಂಡಿ ವ್ಯವಸ್ಥೆ ಮಾಡಿದಲ್ಲಿ ಜನರನ್ನು ಸೊಳ್ಳೆಯಿಂದ ರಕ್ಷಿಸಬಹುದು. ನಗರದ ಸೌಲಭ್ಯಗಳನ್ನೆಲ್ಲ ಗ್ರಾಮೀಣ ಪ್ರದೇಶಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಕುಡಿಯುವ ನೀರಿಗೆ ಟ್ಯಾಂಕರ್ ಮೂಲಕ ಸರಬರಾಜು ಅನಿವಾರ್ಯವಾಗಿದ್ದು ವರುಣನ ಕೃಪೆ ಆದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟವೂ ಹೆಚ್ಚುತ್ತದೆ ಎಂದರು.
ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುರೇಂದ್ರ ನಾಯ್ಕರವರು ಮಾತನಾಡಿ, ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ಎಲ್ಲ ರೀತಿಯ ಕೆಲಸಗಳನ್ನು ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಸದಸ್ಯರು, ಜಿ.ಪಂ. ಸಿಇಒ ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಉಪಸ್ಥಿತರಿದ್ದರು.