ಯೋಧರ ಬಗ್ಗೆ ಸಚಿವ ಮನಗೂಳಿ ಹೇಳಿಕೆ ಅವರ ಮರೆಗುಳಿತನಕ್ಕೆ ಸಾಕ್ಷಿ: ಶಾಸಕ ಸುರೇಶ್ ಕುಮಾರ್
ದಾವಣಗೆರೆ,ಫೆ.28: ಭಾರತೀಯ ಯೋಧರ ಬಗ್ಗೆ ತೋಟಗಾರಿಕೆ ಸಚಿವ ಮನಗೂಳಿ ಉಗ್ರರನ್ನು ಕೊಲ್ಲಬಾರದು ಎಂಬ ಬಾಲಿಶ ಹೇಳಿಕೆ ನೀಡಿದ್ದು, ಆ ಸಚಿವರ ಮರೆಗುಳಿತನಕ್ಕೆ ಸಾಕ್ಷಿ ಎಂದು ಶಾಸಕ ಸುರೇಶ್ ಕುಮಾರ್ ತಿಳಿಸಿದರು.
ನಗರದ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನಿ ಮೋದಿಯೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರವಾದಿಗಳನ್ನು ಕೊಲ್ಲಬಾರದು ಎಂಬುದಾಗಿ ಹೇಳಿಕೆ ನೀಡುವ ಮೂಲಕ ನಮ್ಮ ಸೈನಿಕರ ಬಗ್ಗೆ ಬಾಲಿಶ ಹೇಳಿಕೆ ನೀಡಿದ್ದಾರೆ. ಆದರೆ, ಇನ್ಸ್ಟಾಲ್‍ಮೆಂಟ್‍ನಲ್ಲಿ, ಧಾರಾವಾಹಿಯಂತೆ ಕಂತು ಕಂತುಗಳಲ್ಲಿ ಭಯೋತ್ಪಾದನೆ ನಿಗ್ರಹ ಮಾಡುವುದಕ್ಕೆ ಸಾಧ್ಯವಿಲ್ಲ. ಭಯೋತ್ಪಾದನೆಯನ್ನು, ಭಯೋತ್ಪಾದಕರನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದರು.
ಭಾರತೀಯ ವಾಯುಪಡೆಯ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರಿಗೆ ಯಾವುದೇ ತೊಂದರೆ ನೀಡದೇ, ಸುರಕ್ಷಿತವಾಗಿ ವಾಪಾಸ್ ಭಾರತಕ್ಕೆ ಕಳುಹಿಸುವ ಜವಾಬ್ಧಾರಿ, ಹೊಣೆಗಾರಿಕೆ ಪಾಕಿಸ್ತಾನದ ಮೇಲಿದೆ. ಜಿನೆವಾ ಒಪ್ಪಂದಕ್ಕೆ ಪಾಕಿಸ್ತಾನವೂ ಸಹಿ ಹಾಕಿದ್ದು, ಭಾರತೀಯ ವಾಯುಪಡೆಯ ವೀರಯೋಧ ಅಭಿನಂದನ್‍ರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕಳುಹಿಸುವ ಕೆಲಸ ಪಾಕಿಸ್ತಾನ ಮಾಡಬೇಕು ಎಂದ ಅವರು, ಅಭಿನಂದನ್ ಆದಷ್ಟು ಬೇಗನೇ ಭಾರತಕ್ಕೆ ವಾಪಾಸ್ ಆಗಲಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಏರ್ ಸ್ಟ್ರೈಕ್ ವಿಚಾರ ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಬಿ.ಎಸ್ ಯಡಿಯೂರಪ್ಪ ಯಾವ ಪದ ಬಳಸಿದ್ದಾರೆಂಬ ಬಗ್ಗೆ ಗೊತ್ತಿಲ್ಲ. ಯಾರೂ ಇಂತಹ ವಿಚಾರ ರಾಜಕೀಯಕ್ಕಾಗಿ ಬಳಸುವುದು ಸರಿಯಲ್ಲ ಎಂದ ಅವರು, ವ್ಯಕ್ತಿಗಿಂತಲೂ ದೇಶ ದೊಡ್ಡದು. ಸೇನೆಯ ವಿಚಾರ ಬಿಜೆಪಿ ದಾಳವಾಗಿ ಬಳಸಿಕೊಳ್ಳುವುದಿಲ್ಲ. ಚುನಾವಣೆ ಸಿದ್ಧತೆಗಾಗಿ ಬೂತ್ ಮಟ್ಟದಿಂದ ಕಳೆದ 2-3 ತಿಂಗಳಿನಿಂದಲೂ ಕೆಲಸ ಸಾಗುತ್ತಿದೆ. ಮಾ.2ರಂದು ಇಡೀ ರಾಜ್ಯಾದ್ಯಂತ ಒಂದೇ ದಿನ ಏಕ ಕಾಲಕ್ಕೆ ಬೈಕ್ ರ‍್ಯಾಲಿ ನಡೆಸಲಾಗುವುದು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವನ್ನು ದಾಖಲಿಸಲಿದೆ ಎಂದರು.
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಗೆಲ್ಲಿಸಿದರೆ ದೆಹಲಿಯಲ್ಲಿ ಕನ್ನಡಿಗರ ಧ್ವನಿ ಬರುತ್ತದೆಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಕರ್ನಾಟಕದ ಬಿಜೆಪಿ ಸಂಸದರೂ ಸಂಸತ್ತಿನಲ್ಲಿ ಕನ್ನಡಿಗರೇ ಆಗಿದ್ದು, ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ, ಕನ್ನಡದಲ್ಲೇ ಮಾತನಾಡಿದ್ದಾರೆ. ಭಾಷೆಯನ್ನು ರಾಜಕೀಯಕ್ಕೆ ಕುಮಾರಸ್ವಾಮಿ ಬಳಸಬಾರದು ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಜೀವನಮೂರ್ತಿ, ಜಯಪ್ರಕಾಶ್ ಅಂಬಳ್ಕರ್, ರಾಜನಹಳ್ಳಿ ಶಿವಕುಮಾರ್, ಮುಕುಂದಪ್ಪ, ಅಣಬೇರು ಶಿವಮೂರ್ತಿ, ಎಚ್.ಎನ್. ಶಿವಕುಮಾರ್, ಟಿಪ್ಪುಸುಲ್ತಾನ್, ಎಚ್.ಸಿ. ಜಯಮ್ಮ, ಪಿ.ಸಿ.ಶ್ರೀನಿವಾಸ, ರಾಜಶೇಖರ್, ರಮೇಶ್‍ನಾಯ್ಕ್, ಲಕ್ಷಣ್, ಹೇಮಂತ್‍ಕುಮಾರ್, ಪುಷ್ಪಾವಾಲಿ, ಭಾಗ್ಯಪಿಸಾಳೆ, ಧನುಷ್ ರಡ್ಡಿ ಸೇರಿ ಅನೇಕರಿದ್ದರು.