ಗಡಿಯಲ್ಲಿ ಹೋರಾಡುತ್ತಿರುವವರು ಸೈನಿಕರೇ ಹೊರತು ಆರೆಸ್ಸೆಸ್ ಕಾರ್ಯಕರ್ತರಲ್ಲ: ದಿನೇಶ್ ಗುಂಡೂರಾವ್
ಹುಬ್ಬಳ್ಳಿ, ಫೆ. 28: ದೇಶದ ಸೈನಿಕರ ರಕ್ತದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜಕೀಯ ಮಾಡುತ್ತಿದ್ದಾರೆ. ಸೇನೆಯ ವಿಷಯವನ್ನು ಸ್ವಾರ್ಥ ಸಾಧನೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾಡಿದ ಅವರು, ದೇಶದ ಇತಿಹಾಸದಲ್ಲಿಯೇ ಈ ರೀತಿ ಕೀಳುಮಟ್ಟದ ರಾಜಕೀಯವನ್ನು ಎಂದೂ ನೋಡಿಲ್ಲ. ದೇಶದ ರಕ್ಷಣೆಗಾಗಿ ಯೋಧರು ತಮ್ಮ ರಕ್ತವನ್ನೆ ಚೆಲ್ಲಿ ತ್ಯಾಗ ಮಾಡುತ್ತಿದ್ದಾರೆ. ವಾಯುಪಡೆ ವಿಂಗ್ ಕಮಾಂಡರ್ ಒಬ್ಬರು ಪಾಕಿಸ್ತಾನ ಸೈನಿಕರ ವಶದಲ್ಲಿದ್ದಾರೆ. ಆದರೆ, ಸೈನಿಕರ ಹೋರಾಟದ ಫಲವಾಗಿ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇಂತಹ ಹೇಯ ಮಾತುಗಳನ್ನಾಡಲು ಅವರಿಗೆ ಮನಸ್ಸು ಹೇಗೆ ಬಂತೋ ಗೊತ್ತಿಲ್ಲ. ಸೈನಿಕರ ರಕ್ತದ ಮೇಲೆ ರಾಜಕೀಯ ವ್ಯಾಪಾರ ಮಾಡುತ್ತಿರುವ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪ ವಿಪಕ್ಷ ನಾಯಕರಾಗಿ ರಾಜ್ಯದ ಜನರ ಪರ ಕೆಲಸ ಮಾಡದೆ ಕೇವಲ ‘ಆಪರೇಷನ್ ಕಮಲ’ದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ ಅವರು, ಗಡಿಯಲ್ಲಿ ಆತಂಕದ ವಾತಾವರಣ ಇರುವ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು. ನಮ್ಮ ಮಧ್ಯೆಯೇ ಭಿನ್ನಾಭಿಪ್ರಾಯಗಳು ಬಂದರೆ ಎದುರಾಳಿಯನ್ನು ಎದುರಿಸುವುದು ಹೇಗೆ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ದೇಶ ಭಕ್ತರೇ. ಬಿಜೆಪಿ ಮುಖಂಡರು, ಕಾರ್ಯಕರ್ತರು ಬೇರೆಯವರನ್ನು ಟೀಕಿಸುವುದು, ಪಾಕಿಸ್ತಾನಕ್ಕೆ ಹೋಗಿ ಎನ್ನುವುದನ್ನು ನಿಲ್ಲಿಸಬೇಕು. ದೇಶದ ಗಡಿಯಲ್ಲಿ ಹೋರಾಟ ಮಾಡುತ್ತಿರುವವರು ಸೈನಿಕರೇ ಹೊರತು ಆರೆಸೆಸ್ಸ್ ಕಾರ್ಯಕರ್ತರಲ್ಲ ಎಂದು ಅವರು ತಿರುಗೇಟು ನೀಡಿದರು.