ಅಭಿನಂದನ್ ವಿಚಾರದಲ್ಲಿ ಜಿನೀವಾ ಒಪ್ಪಂದದಂತೆ ಪಾಕ್ ನಡೆದುಕೊಳ್ಳಲಿ: ಎಚ್.ಡಿ ದೇವೇಗೌಡ

Update: 2019-02-28 15:00 GMT

ಕಡೂರು, ಫೆ.28: ಜಿನೀವಾ ಒಪ್ಪಂದದ ಪ್ರಕಾರವೇ ಪಾಕಿಸ್ತಾನ ನಡೆದುಕೊಳ್ಳಬೇಕು. ಅವರ ಸೆರೆಯಲ್ಲಿರುವ ಕಮಾಂಡರ್ ಅಭಿನಂದನ್ ಅವರನ್ನು ಕೂಡಲೇ ಪಾಕಿಸ್ತಾನ ಭಾರತಕ್ಕೆ ಕಳುಹಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಜಿಲ್ಲೆಯ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿನೀವಾ ಒಪ್ಪಂದದ ಪ್ರಕಾರ ಯಾವುದೇ ದೇಶದ ಸೈನಿಕನನ್ನು ಬಂಧಿಸಿದರೂ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡುವಂತಿಲ್ಲ. ಪಾಕಿಸ್ತಾನವೂ ಈ ಕರಾರಿನಂತೆಯೇ ನಡೆದುಕೊಳ್ಳಬೇಕಿದೆ. ಅಭಿನಂದನ್ ಅವರನ್ನು ಗೌರವಯುತವಾಗಿ ನಡೆಸಿಕೊಂಡು ಕೂಡಲೆ ಭಾರತಕ್ಕೆ ವಾಪಸ್ ಕಳುಹಿಸಬೇಕು ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪಾಕಿಸ್ತಾನದ ವಿರುದ್ಧ ಭಾರತ ಸರಕಾರ ಕೈಗೊಂಡ ಕ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂದಿರುವ ಕುರಿತು ಪತ್ರಕರ್ತರು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಪ್ರಶ್ನಿಸಿದಾಗ, ಯಡಿಯೂರಪ್ಪ ಅವರ ಬಗ್ಗೆ ತಾನೀಗ ಏನೂ ಮಾತನಾಡುವುದಿಲ್ಲ. ದೇಶದ ವಿಚಾರ ಬಂದಾಗ ಯಾರೂ ಸಹ ರಾಜಕೀಯ ಬಳಸಬಾರದು. ಎಲ್ಲರೂ ಸೈನಿಕರನ್ನು ಬೆಂಬಲಿಸುವ ಕೆಲಸ ಮಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News