ದೇಶದ ಹಿತದೃಷ್ಟಿಯಿಂದ ಲೋಕಸಭೆ ಚುನಾವಣೆಗೆ ಮೈತ್ರಿ ಅಗತ್ಯ: ಎಚ್.ಡಿ ದೇವೇಗೌಡ
ಕಡೂರು, ಫೆ.28: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಖಚಿತ. ಲೋಕಸಭೆ ಚುನಾಚಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಎಲ್ಲ ಪಕ್ಷಗಳೂ ಒಟ್ಟಾಗುತ್ತಿವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಒಂದು ಸ್ಥಾನ ಹೆಚ್ಚಾಗಬಹುದು, ಇಲ್ಲವೇ ಒಂದು ಸ್ಥಾನ ಕಡಿಮೆ ಆಗಬಹುದು. ಗೆಲ್ಲುವ ಅಭ್ಯರ್ಥಿಗಳನ್ನೇ ಎಲ್ಲ ಕ್ಷೇತ್ರಗಳಲ್ಲಿಯೂ ಕಣಕ್ಕಿಳಿಸಲಾಗುವುದು ಎಂದ ಅವರು, ದೇಶದ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಚುನಾವಣೆ ಎದುರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ಕುಳಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ವೈಯಕ್ತಿಕ ಅಭಿಪ್ರಾಯವನ್ನು ಈ ಹಿಂದೆ ಹೇಳಿದ್ದೆ. ಈಗ ಹಾಸನ ಜಿಲ್ಲೆಯ ಎಲ್ಲಾ ಮುಖಂಡರುಗಳು ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಮುಖಂಡರುಗಳೊಂದಿಗೆ ಚರ್ಚಿಸಿ ನಂತರ ಅಧಿಕೃತ ಘೋಷಣೆ ಮಾಡಲಾಗುವುದು ಎಂದ ಅವರು, ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕಿಳಿಯುವಿರಾ ಎಂಬ ಪ್ರಶ್ನೆಗೆ, ಈ ಹಿಂದೆ ವಯಸ್ಸಿನ ಕಾರಣದಿಂದ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದೆ. ಈಗ ಕೆಲವು ಕ್ಷೇತ್ರಗಳಿಂದ ಕಣಕ್ಕಿಳಿಯುವಂತೆ ಒತ್ತಾಯ ಬರುತ್ತಿದೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ ಎಂದರು.
ಕನ್ನಡಿಗರೊಬ್ಬರು ಪ್ರಧಾನಿ ಎಂಬ ಹೇಳಿಕೆ ಸರಿಯಲ್ಲ
ಕನ್ನಡಿಗರೊಬ್ಬರು ಪ್ರಧಾನಿಯಾಗುತ್ತಾರೆ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಕನ್ನಡಿಗರೊಬ್ಬರು ಪ್ರಧಾನಿ ಎಂಬ ಹೇಳಿಕೆ ನೀಡುವುದು ಸರಿಯಲ್ಲ. ಈ ಹಿಂದೆ ನಾನು ಪ್ರಧಾನಿಯಾಗಿದ್ದಾಗ ಪರಿಸ್ಥಿತಿ ಬೇರೆ ಇತ್ತು. ಆಗ ರಾಜ್ಯದಲ್ಲಿ ನಮ್ಮ ಪಕ್ಷವು ಸ್ವಂತ ಬಲದಿಂದ ಸರಕಾರ ರಚನೆ ಮಾಡಿತ್ತು. ಈಗ ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ಮಾಡುತ್ತಿದ್ದೇವೆ. ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಎಲ್ಲಾ ಪಕ್ಷಗಳೂ ಒಟ್ಟಾಗಿ ಸೇರುತ್ತಿದ್ದೇವೆ. ರಾಹುಲ್ ಪ್ರಧಾನಿ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಇದಕ್ಕೆ ಎಲ್ಲ ಪಕ್ಷಗಳ ಸಹಮತ ಅತ್ಯಗತ್ಯ ಎಂದು ತಿಳಿಸಿದರು.