×
Ad

ಆದಿವಾಸಿಗಳನ್ನು ಅರಣ್ಯದಿಂದ ಒಕ್ಕಲೆಬ್ಬಿಸಲು ಬಿಡಲ್ಲ: ಸಿಎಂ ಕುಮಾರಸ್ವಾಮಿ ಅಭಯ

Update: 2019-02-28 20:57 IST

ಮಡಿಕೇರಿ, ಫೆ.28: ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಪೊನ್ನಂಪೇಟೆಯನ್ನು ಹೊಸ ತಾಲೂಕಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿ ದಿಡ್ಡಳ್ಳಿಯ ಆದಿವಾಸಿಗಳಿಗೆ ನೂತನ 528 ಮನೆಗಳ ಹಂಚಿಕೆ ಹಾಗೂ 146 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ಕೊಡಗಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಕುಶಾಲನಗರ ಕೇಂದ್ರೀಕೃತ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಾಗಿ ಪ್ರಕಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ಹೊಸ ತಾಲೂಕುಗಳಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದರು. 

ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 14 ಹೊಸ ತಾಲೂಕುಗಳನ್ನು ರಚಿಸಿದೆ. ಈ ತಾಲೂಕುಗಳಿಗೆ ಈವರೆಗೂ ಅನುದಾನ ನೀಡಿಲ್ಲ. ಹೀಗಾಗಿ ಎಲ್ಲಾ ಹೊಸ ತಾಲೂಕುಗಳಿಗೆ ಇನ್ನೆರಡು ದಿನಗಳಲ್ಲಿಯೇ 50 ಲಕ್ಷ ರೂ. ಅನುದಾನವನ್ನು ಮೊದಲ ಹಂತದಲ್ಲಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದರು.

ರಾಜ್ಯದಲ್ಲಿ ಆರ್ಥಿಕ ಸಮಸ್ಯೆಯಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕೊಡಗು ಜಿಲ್ಲೆ ಪ್ರಕೃತ್ತಿ ವಿಕೋಪದಿಂದ ಕಂಗೆಟ್ಟ ನಂತರ ಸಂತ್ರಸ್ತರಿಗೆ ನವ ಜೀವನಕ್ಕಾಗಿ ಎಲ್ಲಾ ರೀತಿಯಲ್ಲಿಯೂ ಸರ್ಕಾರ ಸೌಕರ್ಯ ಕಲ್ಪಿಸುತ್ತಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ದುರಸ್ಥಿಗೆ ಶೀಘ್ರಗತಿಯಲ್ಲಿ ಮುಂದಾಗಿದೆ. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರ ಎಲ್ಲಾ ರೀತಿಯ ಆರ್ಥಿಕ ಸಹಕಾರ ನೀಡುತ್ತಿದೆ ಎಂದರು.

6 ತಿಂಗಳ ಹಿಂದಿನ ಪ್ರಕೃತ್ತಿ ವಿಕೋಪದಿಂದಾಗಿ ಅರ್ಧ ಕುಸಿದಿರುವ ಬೆಟ್ಟ ಗುಡ್ಡಗಳು ಈ ವರ್ಷದ ಮಳೆಗಾಲದಲ್ಲಿ ಪೂರ್ಣ ಕುಸಿಯುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪರಿಣಿತರನ್ನು ಕರೆಸಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಿದೆ. ಯಾವುದೇ ನಿರ್ಧಾರ ಕೈಗೊಳ್ಳಲೂ ಕೊಡಗು ಜಿಲ್ಲಾಧಿಕಾರಿ ಸ್ವಾತಂತ್ರರಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ನ್ಯಾಯಾಲಯದ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯದ ಅಡ್ವೊಕೇಟ್ ಜನರಲ್ ಗೆ ಸೂಚಿಸಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ, ಆದಿವಾಸಿಗಳನ್ನು ಖಂಡಿತಾ ಸಂಕಷ್ಟಕ್ಕೆ ತಳ್ಳಲಾರೆವು ಎಂದು ಭರವಸೆ ನೀಡಿದರು. ಕೊಡಗು ಜಿಲ್ಲೆಯ ಪ್ರಕೃತ್ತಿ ವಿಕೋಪದಲ್ಲಿ ಆಸ್ತಿ ಕಳೆದುಕೊಂಡವರಿಗೆ ಹೆಕ್ಟೇರ್ ಗೆ 25 ಸಾವಿರ ರೂ. ನಂತೆ ಪರಿಹಾರ ನೀಡಲಾಗುತ್ತದೆ. ಮಳೆಗಾಲಕ್ಕೆ ಮುನ್ನ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನೀಡುವ ನಿಟ್ಟಿನಲ್ಲಿ ತುರ್ತು ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅವರು ನುಡಿದರು.

ಕೊಡಗಿನ ಪ್ರಕೃತ್ತಿ ವಿಕೋಪ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಬದಿಗಿಟ್ಟು ಪರಿಹಾರ ನೀಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಇದೇ ಸಂದರ್ಭ ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ಜಲಪ್ರಳಯದಿಂದಾಗಿ ಇನ್ನೂ ನಾಪತ್ತೆಯಾಗಿರುವ ವಿದ್ಯಾರ್ಥಿನಿ ಮಂಜುಳಾ ಪೋಷಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಶೇಷ ಪ್ರಕರಣವಾಗಿ 5 ಲಕ್ಷ ರೂ. ಗಳ ಆರ್ಥಿಕ ನೆರವು ನೀಡಿದರು.

ಬಸವನಹಳ್ಳಿ

ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಪೊನ್ನಂಪೇಟೆ ಸೇರಿದಂತೆ 13 ಹೊಸ ತಾಲೂಕುಗಳನ್ನು ಘೋಷಿಸಿದ್ದು, ಮೂಲಭೂತ ಸೌಲಭ್ಯಕ್ಕೆ ತಕ್ಷಣವೆ ತಲಾ 25 ರಿಂದ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.

ಬಸವನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಮನೆಗಳ ಹಸ್ತಾಂತರದೊಂದಿಗೆ ಸುಮಾರು 143 ಕೋಟಿ ರೂ.ಗಳ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

ದಿಡ್ಡಳ್ಳಿ ಆದಿವಾಸಿ ನಿರಾಶ್ರಿತ ಕುಟುಂಬಗಳು ಸರ್ಕಾರದೊಂದಿಗೆ ವಸತಿಗಾಗಿ ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿದ್ದು, ಇಂದು ಆ ಆದಿವಾಸಿ ನಿರಾಶ್ರಿತರಿಗೆ ಹಕ್ಕು ಪತ್ರ ವಿತರಣೆ ಮಾಡಿರುವುದಾಗಿ ತಿಳಿಸಿದರು. ನೂತನ ತಾಲೂಕು ರಚನೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ 25 ರಿಂದ 50 ಲಕ್ಷ ರೂ.ಗಳನ್ನು ಒದಗಿಸಲಾಗುತ್ತದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ,. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್, ಸಚಿವ ಸಿ.ಎಸ್ ಪುಟ್ಟರಾಜು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಶಾಸಕ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಉಪಸ್ಥಿತರಿದ್ದರು.

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗಾಗಿ 53.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 528 ಮನೆಗಳ ಹಕ್ಕುಪತ್ರಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಸ್ತಾಂತರಿಸಿದರು.

ಆತ್ಮೀಯ ಸ್ವಾಗತ: ಬಸವನಹಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗಿರಿಜನರ ಸಾಂಪ್ರದಾಯಿಕ ನೃತ್ಯ, ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.

ಇದೇ ಸಂದರ್ಭ ಕುಶಾಲನಗರದನ್ನು ಪ್ರತ್ಯೇಕ ತಾಲೂಕನ್ನಾಗಿ ಮಾಡಲು ಅನುಮೋದನೆ ನೀಡಿರುವ ಕ್ರಮದ ಬಗ್ಗೆ ಕಾವೇರಿ ತಾಲೂಕು ಹೋರಾಟ ಸಮಿತಿ, ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರ ಹಾಕುವ ಮೂಲಕ ಮುಖ್ಯ ಮಂತ್ರಿಗಳನ್ನು ಅಭಿನಂದಿಸಿತು.      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News