ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ ಎನ್ನುವುದು ತಪ್ಪು: ಡಾ.ಬಂಜಗೆರೆ ಜಯಪ್ರಕಾಶ್

Update: 2019-02-28 15:51 GMT

ಮೈಸೂರು,ಫೆ.28: ಭಾರತದ ಎಲ್ಲಾ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ನೀಡಲು, ಮೀಸಲಾತಿ ಕಲ್ಪಿಸಲಾಗಿದ್ದು, ಅದು ಕೇವಲ ಎಸ್ಸಿ, ಎಸ್ಟಿಗೆ ಮಾತ್ರ ಎನ್ನುವುದು ತಪ್ಪು ಮತ್ತು ಇಂತಹ ಮನಸ್ಥಿತಿಗೆ ಜಾತಿ ಮತ್ಸರವೇ ಕಾರಣ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಬುಧವಾರ ಮೈಸೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಎನ್.ರಾಚಯ್ಯ ಪೀಠವು ಆಯೋಜಿಸಿದ್ದ “ಪ್ರಸ್ತುತ ಕಾಲದಲ್ಲಿ ಮೀಸಲಾತಿಯ ಸಮಸ್ಯೆ ಮತ್ತು ಭವಿಷ್ಯದ ಪ್ರಯೋಜನ” ಕುರಿತು ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ಜಾತಿಯನ್ನು ಮೇಲ್ಜಾತಿಯ ಜನರು ತನಗೆ ಸರಿಸಮನಾಗಿ ನೋಡಲು ಈಗಲೂ ಸಹ ಭಾರತೀಯ ಜಾತಿಮನಸ್ಥಿತಿಗೆ ಅವಕಾಶವಾಗಿಲ್ಲ. ಆದ್ದರಿಂದ ಮೀಸಲಾತಿ ವಿರೋಧಿಗಳು ದಲಿತರನ್ನು ಮತ್ತೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಿಂದ ದೂರವಿಟ್ಟು ಅವರನ್ನು ನಿರ್ಗತಿಕರನ್ನಾಗಿ ಮಾಡಿ, ಬಿಟ್ಟಿ ಚಾಕರಿಗೆ ಕಳುಹಿಸಬೇಕು ಎಂದು ನಿರ್ಧಾರ ಮಾಡಿದಂತೆ ಇದೆ ಎಂದು ಕಿಡಿಕಾರಿದರು.

ರಾಯಚೂರು ವಿವಿ ವಿಶೇಷಾಧಿಕಾರಿ ಪ್ರೊ.ಮುಜಾಫರ್ ಅಸ್ಸಾದಿ ಮಾತನಾಡಿ, ಗುಜರಾತಿನ ರಾಜಕಾರಣ ಮತ್ತು ಅಸ್ಮಿತೆಯ ರಾಜಕಾರಣ ಇನ್ನೂ ಕೂಡ ನಿಂತಿಲ್ಲ. ಹೊಸ ಜಾತಿಗಳು ಸೃಷ್ಟಿಯಾಗುತ್ತಲೇ ಇವೆ. ಅಳಿವಿನಂಚಿನಲ್ಲಿರು ಬುಡಕಟ್ಟುಗಳು, ಕಾಂಡಂಚಿನ ಜಾತಿಗಳಿಗೆ ಇನ್ನೂ ಮೀಸಲಾತಿ ದೊರಕಿಲ್ಲ, ಮೀಸಲಾತಿ ಎನ್ನುವುದು ಕೊನೆಯಾಗಬಾರದು. ಸಾಮಾಜಿಕ ನ್ಯಾಯ ದೊರಕುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ.ಎಚ್.ಎಂ.ರಾಜಶೇಖರ್, ರಾಜ್ಯ ಶಾಸ್ತ್ರದ ಅಧ್ಯಯನ ವಿಬಾಗದ ಮುಖ್ಯಸ್ಥ ಡಾ.ಕೃಷ್ಣ ಹೊಂಬಾಲ್, ಪ್ರೊ.ಜಿ.ಟಿ.ರಾಮಚಂದ್ರಪ್ಪ, ಪ್ರೊ.ಶಿವಪ್ಪ, ಡಾ.ಸುನಿಲ್, ಡಾ.ಬಿ.ಎನ್ ಯಶೋಧ, ರಮ್ಯ, ಆಸ್ಕರ್, ಶಶಿಕುಮಾರ್, ರಾಕೇಶ್ ಆರ್.ದೇಸ್ಕರ್, ಚಂದ್ರಿಕಾ, ಅಮೀಶ್, ಭರತ್, ಅರ್ಪಿತ, ನಟರಾಜು, ನಗ್ಮಾ, ಲಿಂಗರಾಜು, ಸತೀಶ್, ರವಿ. ದುಂಡಪ್ಪ, ನಾಗಮ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News