ನಟ ಶ್ರೀನಾಥ್ ವಸಿಷ್ಠಗೆ ಖಾಸಗಿ ಟ್ರಾವೆಲ್ ಏಜೆನ್ಸಿಯಿಂದ ವಂಚನೆ: ದೂರು ದಾಖಲು
ಮೈಸೂರು,ಫೆ.28: ಖಾಸಗಿ ಟ್ರಾವೆಲ್ ಏಜೆನ್ಸಿಯೊಂದು ವಿದೇಶ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಚಲನಚಿತ್ರ, ಕಿರುತೆರೆ ನಟರೋರ್ವರಿಗೆ ಹಣ ಪಡೆದು ನಕಲಿ ಟಿಕೇಟ್ ನೀಡಿ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಟ ಶ್ರೀನಾಥ್ ವಸಿಷ್ಠ ಅವರೇ ವಂಚನೆಗೊಳಗಾದವರಾಗಿದ್ದು, ಟ್ರಾವೆಲ್ ಏಜೆನ್ಸಿಯೊಂದು ಅವರನ್ನು ವಂಚಿಸಿದೆ ಎನ್ನಲಾಗಿದೆ. ಶ್ರೀನಾಥ್ ವಸಿಷ್ಠ ಅವರು ಈ ಕುರಿತು ನಜರ್ ಬಾದ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.
ನಟ ಶ್ರೀನಾಥ್ ಅವರು ಬೆಂಗಳೂರಿನ ರೋಟರಿ ಜ್ಞಾನೋದಯ ಹಾಗೂ ರೋಟರಿ ಗ್ರೇಟರ್ ಕ್ಲಬ್ ವತಿಯಿಂದ 19 ಸ್ನೇಹಿತರೊಂದಿಗೆ ಸಿಂಗಪೂರ್ ರಾಯಲ್ ಕೆರೆಬಿಯನ್ ಕ್ರೂಸಿಗೆ ಪ್ರವಾಸ ತೆರಳಲು ನಿರ್ಧರಿಸಿದ್ದರು. ಅದರಂತೆ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿ ಖಾಸಗಿ ಟ್ರಾವೆಲ್ ಏಜೆನ್ಸಿಯ ಕುರಿತು ಮಾಹಿತಿ ಲಭಿಸಿದೆ. ಬಳಿಕ ಟ್ರಾವೆಲ್ ಏಜೆನ್ಸಿಯ ಮಾಲಕನನ್ನು ಭೇಟಿ ಮಾಡಿ 7 ರಾತ್ರಿ 8 ಹಗಲು ಪ್ರವಾಸಕ್ಕೆ ಸ್ನೇಹಿತರೆಲ್ಲ ಸೇರಿ ಒಟ್ಟು 8.90 ಲಕ್ಷ ರೂ. ನೀಡಿದ್ದೆವು. ನಂತರ ಟಿಕೆಟ್ ಅನ್ನು ಮಾಲಕರು ನಮಗೆ ಕಳುಹಿಸಿದ್ದರು. ಆದರೆ ಟಿಕೆಟ್ ಅಸಲಿಯಲ್ಲ, ನಕಲಿ ಎಂಬುದು ತಿಳಿದು ಬಂದಿದೆ. ವಿಚಾರಿಸಿದರೆ ಸಾಕಷ್ಟು ಸಬೂಬು ಹೇಳಿ ತಪ್ಪಿಸಿಕೊಂಡಿದ್ದರು. ಒತ್ತಾಯದ ಮೇರೆಗೆ 3 ಲಕ್ಷ ರೂ ಹಣ ವಾಪಸ್ ನೀಡಿದ್ದು, ಉಳಿದ ಹಣವನ್ನು ನೀಡಿಲ್ಲ. ನಾನು ಇನ್ವಾಲ್ವೆನ್ಸಿ ಘೋಷಣೆ ಮಾಡಿಕೊಳ್ಳುತ್ತಿದ್ದು ಹಣ ನೀಡಲು ಸಾಧ್ಯವಿಲ್ಲವೆಂದು ಮಾಲಕರು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.