ಕಡೂರು: 76 ಕೋಟಿ ರೂ. ಕಾಮಗಾರಿಗೆ ಸಚಿವ ರೇವಣ್ಣ ಚಾಲನೆ

Update: 2019-02-28 17:32 GMT

ಕಡೂರು, ಫೆ.28: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 76 ಕೋ.ರೂ. ವೆಚ್ಚದ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಪ್ರವಾಸಿಮಂದಿರದ ಆವರಣದಲ್ಲಿ ಇಂದು ಚಾಲನೆ ನೀಡಿದರು.

ನಂತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಡೂರು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೊಳಿಸಬೇಕಿದೆ. ಕ್ಷೇತ್ರದ ಶಾಸಕರಾದ ಬೆಳ್ಳಿಪ್ರಕಾಶ್ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಹಲವಾರು ರಸ್ತೆಗಳ ಅಭಿವೃದ್ಧಿಗೆ ಪತ್ರ ನೀಡಿದ್ದರು. ಈ ಪತ್ರದಲ್ಲಿನ ಉಲ್ಲೇಖಗಳನ್ನು ಗಮನಿಸಿ ಅನುದಾನವನ್ನು ನೀಡಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರದ ನವೀಕರಣಕ್ಕಾಗಿ ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು. ಹೆಚ್ಚುವರಿಯಾಗಿ ಇನ್ನೂ 3 ಕೋಟಿ ರೂ.ಅನುದಾನ ನೀಡಲಾಗುವುದು. ಬೀರೂರು ಮತ್ತು ಕಲ್ಲಾಪುರದ ಶಾದಿಮಹಲ್‌ಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 47 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗಿದ್ದು, ಇದರಿಂದ 44 ಲಕ್ಷ ಕುಟುಂಬಗಳು ಸಾಲ ಮುಕ್ತವಾಗಲಿವೆ. ಜಿಲ್ಲೆಗೆ 550 ಕೋಟಿ ರೂ. ಕಡೂರು ತಾಲೂಕಿಗೆ 87 ಕೋಟಿ ರೂ. ಸಹಕಾರ ಬ್ಯಾಂಕಿನ ಸಾಲಮನ್ನಾವಾಗಿದೆ ಎಂದರು.

ಕಡೂರು ತಾಲೂಕಿನಾದ್ಯಂತ ಬರಗಾಲದಿಂದ ನಾಸವಾಗಿರುವ ತೆಂಗಿನ ಮರಗಳಿಗೆ ರಾಜ್ಯ ಸರಕಾರ 200 ಕೋ.ರೂ. ಬಜೆಟ್‌ನಲ್ಲಿ ಇರಿಸಿದೆ. ಹೆಣ್ಣುಮಕ್ಕಳಿಗೆ ಹೆರಿಗೆ ಭತ್ತೆ 6 ತಿಂಗಳಿಗೆ 12 ಸಾವಿರ ದೊರಕಲಿದೆ. ಕಡೂರು ಮತ್ತು ಬೀರೂರು ಪುರಸಭೆಗೆ ತಲಾ 5 ಕೋಟಿ ರೂ. ಅನುದಾನ ನೀಡಲಾಗುವುದು. ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಮಾಡದೆ ಪಟ್ಟಣದ ಅಭಿವೃದ್ಧಿಯಾಗಬೇಕಿದೆ ಎಂದರು.

ಈ ಸಂದರ್ಭ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿದರು. ಉಪ ಸಭಾಪತಿ ಎಸ್.ಎಲ್. ಧರ್ಮೆಗೌಡ ಮಾತನಾಡಿದರು. ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ, ಜಿ.ಪಂ. ಸದಸ್ಯ ಕೆ.ಆರ್. ಮಹೇಶ್ ಒಡೆಯರ್, ತಾ.ಪಂ. ಉಪಾಧ್ಯಕ್ಷ ಎಸ್.ಕೆ. ಚಂದ್ರಪ್ಪ, ಪುರಸಭಾ ಅಧ್ಯಕ್ಷ ಎಂ. ಮಾದಪ್ಪ, ಉಪಾಧ್ಯಕ್ಷ ರಾಜೇಶ್, ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್.ರೂಪ, ತಹಶೀಲ್ದಾರ್ ಉಮೇಶ್, ಎಇಇ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News