ಸುಮಲತಾ ಚುನಾವಣಾ ತಾಲೀಮು ಶುರು: ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ, ಬೆಂಬಲ ಕೋರಿಕೆ
ಮಂಡ್ಯ, ಫೆ.28: ಕಾಂಗ್ರೆಸ್ ವರಿಷ್ಠರು ಇತರ ಕ್ಷೇತ್ರಗಳಿಂದ ಸ್ಪರ್ಧಿಸುವ ಸಲಹೆ ನೀಡಿದ್ದರೂ ಅದನ್ನು ನಿರಾಕರಿಸಿದ್ದು, ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್ ಪುನರುಚ್ಚರಿಸಿದ್ದಾರೆ.
ಜಿ.ಮಾದೇಗೌಡ, ಹೆಚ್.ಡಿ.ಚೌಡಯ್ಯ, ಹೆಚ್.ಬಿ.ರಾಮು ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರನ್ನು ಗುರುವಾರ ಭೇಟಿಯಾಗಿ ಬೆಂಬಲ ಕೋರಿದ ಅವರು, ಮಂಡ್ಯ, ನಾಗಮಂಗಲದ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಮೂಲಕ ಮೈತ್ರಿ ಹಾದಿಯನ್ನು ಮತ್ತಷ್ಟು ಕಗ್ಗಂಟಾಗಿಸಿದ್ದಾರೆ.
ನಿನ್ನೆ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಅಂಬರೀಷ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದ ಅವರು, ಮುತ್ತೇಗೆರೆಯಲ್ಲಿರುವ ಮನೆ ದೇವರು ಮಾಯಮ್ಮನಿಗೆ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಅವರಿಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ಅಪಾರ ಸಂಖ್ಯೆಯ ಅಂಬಿ ಅಭಿಮಾನಿಗಳು ಸಾಥ್ ನೀಡಿದರು.
ಇಡೀ ದಿನ ಕಾಂಗ್ರೆಸ್ ಬೆಂಬಲ ಒಗ್ಗೂಡಿಸುವತ್ತ ಮುಖಂಡರನ್ನು ಭೇಟಿಯಾಗಿ, ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಸಮಯ ಕಳೆದ ಸುಮಲತಾ, ಸ್ಪರ್ಧೆಯ ಪೂರ್ವಭಾವಿ ಸಿದ್ಧತೆ ತಾಲೀಮು ನಡೆಸಿದಂತಿತ್ತು. ಸುಮಲತಾ ಅವರ ಸ್ಪರ್ಧೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಗಾಂಧಿವಾದಿ, ಹಿರಿಯ ಕಾಂಗ್ರೆಸ್ ಮುಖಂಡ ಜಿ.ಮಾದೇಗೌಡ ಕ್ಷೇತ್ರವನ್ನು ಪಕ್ಷ ಉಳಿಸಿಕೊಳ್ಳುವಂತೆ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸುವುದಾಗಿ ಭರವಸೆ ಇತ್ತಿದ್ದಾರೆ.
ನನ್ನ ಪತಿ ಅಂಬರೀಷ್ ಅವರಿಗೆ ಮಾದೇಗೌಡರು ತಂದೆಯಿದ್ದಂತೆ. ರಾಜಕೀಯಕ್ಕೆ ಬರಲು ನನ್ನ ಪತಿಗೆ ಸ್ಪೂರ್ತಿಯಾಗಿದ್ದರು. ವಿವಾಹವಾದ ಹೊಸತರಲ್ಲಿ ಪರಿಚಯಿಸಲಾಗಿತ್ತು. ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಅವರ ಆಶೀವಾದ ಪಡೆಯಲು ಬಂದಿದ್ದೇನೆ ಎಂದು ಸುಮಲತಾ ಸ್ಪಷ್ಟಪಡಿಸಿದರು.
ದುರಾಸೆಯಿಂದ ಮಂಡ್ಯಕ್ಕೆ ಬಂದಿಲ್ಲವೆಂದು ತಮ್ಮ ವಿರುದ್ಧದ ಜೆಡಿಎಸ್ ಆರೋಪಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, ದುರಾಸೆ ಇದ್ದಿದ್ದರೆ ಅಂಬರೀಷ್ ಅಧಿಕಾರಾವಧಿಯಲ್ಲಿ ಏನನ್ನೂ ಬೇಕಾದರೂ ಗಳಿಸಬಹುದಿತ್ತು. ಅದನ್ನು ಅವರು ಮಾಡಲಿಲ್ಲ. ಮಗ ಹಾಗೂ ನಾನೂ ಅಷ್ಟೇ. ದುರಾಸೆಯಿಂದ ಇಲ್ಲಿಗೆ ಬಂದಿಲ್ಲ. ಮಂಡ್ಯ ಜಿಲ್ಲೆಯ ಜನರ ಋಣ ತೀರಿಸಲು ಬಂದಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು, ಅಂಬರೀಷ್ ಅಭಿಮಾನಿಗಳ ಸಮ್ಮುಖದಲ್ಲಿ ಘೋಷಿಸಿದರು.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕಿದ್ದು, ಬೇರೆಡೆ ಸ್ಪರ್ಧಿಸುವಂತೆ ಕಾಂಗ್ರೆಸ್ ವರಿಷ್ಠರಿಂದ ಆಹ್ವಾನ ಬಂದಿದೆ. ಆದರೆ, ಅದು ನನಗೆ ಸಮ್ಮತವಿಲ್ಲ. ಸ್ಪರ್ಧಿಸುವುದೇ ಆದರೆ ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟವಾಗಿ ಹೇಳಿರುವುದಾಗಿ ಸುದ್ದಿಗಾರರಿಗೆ ಸುಮಲತಾ ತಿಳಿಸಿದರು.
ಅಂಬರೀಷ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಮಂತ್ರಿಯಾಗಿದ್ದರು. ವಿಧಾನಸಭೆಗೆ ಆಯ್ಕೆಯಾಗಿ ಮಂತ್ರಿಯಾಗಿದ್ದರು. ಅವರ ಮಾರ್ಗದಲ್ಲಿ ನಡೆಯುವ ಉದ್ದೇಶದಿಂದ ಅವರು ಸ್ಪರ್ಧಿಸುತ್ತಿದ್ದ ಕ್ಷೇತ್ರದಿಂದ ಸ್ಪರ್ಧಿಸುವುದು ಪತ್ನಿಯ ಧರ್ಮವೆಂದು ಹೇಳಿದರು.