×
Ad

ಡಿ.ಸಿ ತಮ್ಮಣ್ಣರ ಪ್ರಭಾವದಿಂದ ಪಾಸ್‍ಪೋರ್ಟ್ ಕೇಂದ್ರ ಮದ್ದೂರಿಗೆ: ಸಂಸದ ಶಿವರಾಮೇಗೌಡ ಅಸಮಾಧಾನ

Update: 2019-02-28 23:30 IST

ಮಂಡ್ಯ, ಫೆ.28: ಸಚಿವ ಡಿ.ಸಿ.ತಮ್ಮಣ್ಣ ಅವರ ಪ್ರಭಾವದಿಂದ ಮಂಡ್ಯ ನಗರಕ್ಕೆ ಮಂಜೂರಾಗಿದ್ದ ಪಾಸ್‍ಪೋರ್ಟ್ ಕೇಂದ್ರ ಮದ್ದೂರಿಗೆ ಸ್ಥಳಾಂತರಗೊಂಡಿತು. ಇದರಿಂದ ನನಗೆ ಅಘಾತವಾಗಿದೆ ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಂಪರ್ಕ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹಾಗೂ ಸಚಿವ ಸದಾನಂದಗೌಡ ಅವರ ಮೇಲೆ ಒತ್ತಡ ತಂದು ಮಂಡ್ಯಕ್ಕೆ ಮಂಜೂರು ಮಾಡಿಸಿದ್ದೆ. ಆದರೆ, ಇಲ್ಲಿನ ಅಂಚೆ ಕಚೇರಿಯ ರಾಜ್ಯ ಹಾಗೂ ಜಿಲ್ಲಾಮಟ್ಟದ ಕೆಳಗಿನ ಅಧಿಕಾರಿಗಳ ಚಿತಾವಣೆಯಿಂದ ಮದ್ದೂರಿಗೆ ಸ್ಥಳಾಂತರವಾಗಿದೆ ಎಂದರು.

ದಕ್ಷಿಣ ಕರ್ನಾಟಕಕ್ಕೆ 7 ಪಾಸ್ ಪೋರ್ಟ್ ಕಚೇರಿಗಳನ್ನು ತೆರೆಯುವ ಅವಕಾಶವಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಿದ್ದ ಪಾಸ್‍ಪೋರ್ಟ್ ಕಚೇರಿ ಆರಂಭಕ್ಕೆ ಕೇಂದ್ರ ಸರಕಾರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾದೆ. ಆದರೆ, ಅಂಚೆ ಇಲಾಖೆಯಲ್ಲಿರುವ ಮದ್ದೂರು ಭಾಗದ ಅಧಿಕಾರಿಗಳು ಹಾಗೂ ಡಿ.ಸಿ.ತಮ್ಮಣ್ಣ ಅವರ ಪ್ರಭಾವದಿಂದ ಒಲ್ಲದ ಮನಸ್ಸಿನಿಂದ ಮದ್ದೂರು ಕೇಂದ್ರದಲ್ಲಿ ಪಾಸ್‍ಪೋರ್ಟ್ ಕಚೇರಿ ಆರಂಭಗೊಳ್ಳಲು ಅಸಹಾಯಕನಾಗಿ ಒಪ್ಪಿಗೆ ಸೂಚಿಸಬೇಕಾಯಿತು ಎಂದು ಅವರು ಆರೋಪಿಸಿದರು.

ಅಂಚೆ ಇಲಾಖೆಯ ಉನ್ನತಾಧಿಕಾರಿ ರಾಜೇಂದ್ರಕುಮಾರ್, ವಿದೇಶಾಂಗ ಖಾತೆಯ ಅಧಿಕಾರಿ ಭರತ್‍ಕುಮಾರ್ ಸಮ್ಮುಖದಲ್ಲಿ ಸಚಿವ ತಮ್ಮಣ್ಣ ಹಾಗೂ ನನ್ನ ಉಪಸ್ಥಿತಿಯಲ್ಲಿ ಇಂದಿನಿಂದ ಮದ್ದೂರಿನಲ್ಲಿ ಪಾಸ್‍ಪೋರ್ಟ್ ಕಚೇರಿ ಆರಂಭಗೊಂಡಿದೆ. ಜಿಲ್ಲಾ ಕೇಂದ್ರದಲ್ಲೇ ಆರಂಭಿಸಬೇಕೆಂಬ ನನ್ನ ಕಾಳಜಿಗೆ ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳು ಬೆಂಬಲ ಸೂಚಿಸಲಿಲ್ಲ ಎಂದು ಸ್ವಪಕ್ಷದ ನಾಯಕರ ಮೇಲೆ ಅತೃಪ್ತಿ ಹೊರ ಹಾಕಿದರು.

ಸದ್ಯದಲ್ಲೇ ಲೋಕಸಭೆಗೆ ಚುನಾವಣೆ ನಡೆಯಲಿದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮದ್ದೂರಿಗೆ ಕಚೇರಿ ವರ್ಗಾಯಿಸಲು ಅವಕಾಶ ನೀಡುತ್ತಿರಲಿಲ್ಲ. ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದರಿಂದ ಕಚೇರಿ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಿದೆ ಎಂದು ಅವರು ತಿಳಿಸಿದರು.

ನಾನೇ ಅಭ್ಯರ್ಥಿ: ಮುಂದಿನ ಲೋಕಸಭೆ ಚುನಾವಣೆಯ ಮಂಡ್ಯ ಲೋಕಸಭಾ ಅಭ್ಯರ್ಥಿ ನಾನೇ. ಆದರೆ, ನಿಖಿಲ್‍ಕುಮಾರ್ ಸ್ಪರ್ಧಿಸಿದರೆ ಅವರಿಗೆ ಸ್ಥಾನ ಬಿಟ್ಟುಕೊಟ್ಟು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಶಿವರಾಮೇಗೌಡ ಸ್ಪಷ್ಟಪಡಿಸಿದರು.

ನಾನು ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬದ ನಿಷ್ಠನಾಗಿದ್ದು, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಗೌಡರ ಕುಟುಂಬದವರು ಯಾರೇ ಸ್ಪರ್ಧಿಸಿದರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಗೌಡರ ಕುಟುಂಬ ಹೊರತುಪಡಿಸಿದರೆ ಮುಂದಿನ ಚುನಾವಣೆಯಲ್ಲೂ ನನಗೆ ಅವಕಾಶ ಕಲ್ಪಿಸಬೇಕೆಂಬುದು ನನ್ನ ಬೇಡಿಕೆಯಾಗಿದೆ ಎಂದರು.

ಕೇವಲ ಆರು ತಿಂಗಳ ಅವಧಿಗೆ ಸಂಸದನಾಗಿ ಕಾರ್ಯನಿರ್ವಹಿಸಿ ಮನೆಗೆ ತೆರಳಲು ನನಗೂ ಇಷ್ಟವಿಲ್ಲ. ಗೌಡರ ಕುಟುಂಬದವರು ಸ್ಪರ್ಧಿಸಿದರೆ ನನಗೆ ಪರ್ಯಾಯ ಅವಕಾಶ ಕಲ್ಪಿಸಲು ವರಿಷ್ಠರಲ್ಲಿ ಮನವಿ ಮಾಡುತ್ತೇನೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ಕೆಲವರು ಜೆಡಿಎಸ್ ವರಿಷ್ಠರಿಗೆ ಕಿವಿ ಕಚ್ಚಿ ಆಪ್ತರಾಗಲು ಹವಣಿಸುತ್ತಿದ್ದಾರೆ. ಕೆಲವು ಸ್ವಪಕ್ಷೀಯರು ನನ್ನ ವಿರುದ್ಧ ಚಿತಾವಣೆ ನಡೆಸುತ್ತಿದ್ದಾರೆ. ಇದಕ್ಕೆ ತಿಲಾಂಜಲಿ ಹಾಡಲು ಬಹಿರಂಗ ಸಭೆಯಲ್ಲಿ ನಿಖಿಲ್‍ಗೆ ಬೆಂಬಲ ಸೂಚಿಸಿದ್ದೇನೆ ಎಂದು ತಮ್ಮ ಬಹಿರಂಗ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಮುಂದಿನ ದಿನಗಳಲ್ಲಿ ಯಾವುದೇ ಹೊಸ ಪಕ್ಷ ಸೇರುವ ಬಯಕೆ ಇಲ್ಲ. ನನ್ನ ರಾಜಕೀಯ ಅಂತ್ಯ ಜೆಡಿಎಸ್ ಪಕ್ಷದಲ್ಲೇ ಕೊನೆಗೊಳ್ಳಲಿದೆ. ನಾನು ದೇವೇಗೌಡರ ಕುಟುಂಬದ ನಿಷ್ಠನಾಗಿದ್ದು, ಪಕ್ಷಾಂತರ ಮಾಡುವ ಪ್ರಶ್ನೆ ಇಲ್ಲ. ಕಳೆದ ಉಪ ಚುನಾವಣೆಯಲ್ಲಿ ನನಗೆ ಯಾವುದೇ ಷರತ್ತು ವಿಧಿಸಿರಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News