ಪರಿಶಿಷ್ಟರ ರುದ್ರಭೂಮಿ ಒತ್ತುವರಿ; ತೆರವಿಗೆ ಒತ್ತಾಯ
ಚಿಕ್ಕಮಗಳೂರು : ನಗರ ಸಮೀಪದ ಹಿರೇಮಗಳೂರು ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಮೀಸಲಿಟ್ಟದ್ದ ರುದ್ರಭೂಮಿಯನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯಿಸಿ ನಿವಾಸಿಗಳು ಜಿಲ್ಲಾಧಿಕಾರಿ. ಡಾ.ಬಗಾದಿ ಗೌತಮ್‍ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಹಿರೇಮಗಳೂರು ಗ್ರಾಮದ ಸಮೀಪದಲ್ಲಿರುವ ಲಕ್ಷ್ಮೀಪುರ ಗ್ರಾಮದ ವಾಸಿಗಳಾದ ಬಸವರಾಜ್, ಸತೀಶ್, ಜಯಪ್ಪ, ಚಂದ್ರಪ್ಪ, ಪುಟ್ಟಣ್ಣ ಎಂಬುವರು ಒತ್ತುವರಿ ಮಾಡಿಕೊಂಡು ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಒತ್ತುವರಿ ಜಾಗದಲ್ಲಿ ರಸ್ತೆಗಳನ್ನು ನಿರ್ಮಿಸಿ ರುದ್ರಭೂಮಿಯನ್ನು ವಿರೂಪಗೊಳಿಸಿರುತ್ತಾರೆ. ಇದನ್ನು ಕೇಳಲು ಹೋದರೆ ಉಡಾಫೆ ಉತ್ತರ ನೀಡಿ ಜಾತಿನಿಂದನೆ ಅವಮಾನಿಸುತ್ತಿದ್ದಾರೆ. ಗ್ರಾಮದಲ್ಲಿ ದಲಿತರಿಗೆ ಮೀಸಲಾಗಿದ್ದ ಈ ರುದ್ರಭೂಮಿ ಹೊರತಾಗಿ ಬೇರೆಲ್ಲೂ ಸ್ಮಶಾನಕ್ಕೆ ಜಾಗವಿಲ್ಲ. ಒತ್ತುವರಿದಾರರಿಗೆ ರಾಜಕಾರಣಿಗಳು ಬೆಂಬಲ ಇರುವುದರಿಂದ ತಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು ಮನವಿಯಲ್ಲಿ ನಿವಾಸಿಗಳು ಆರೋಪಿಸಿದ್ದಾರೆ.
ದಲಿತರಿಗೆ ಮೀಸಲಾದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒತ್ತುವರಿ ಮಾಡಿರುವ ಜಾಗವನ್ನು ಬಿಡಿಸಿ ರುದ್ರಭೂಮಿಗೆ ನೀಡುವಂತೆ ಜಿಲ್ಲಾ ಮಾದಿಗ ಸಂಘದ ಅಧ್ಯಕ್ಷ ರಮೇಶ್ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚಂದ್ರಶೇಖರ್, ರವಿ, ಗಂಗಾಧರ್, ರಾಜು, ವಸಂತ, ಚಂದ್ರಪ್ಪ, ಈಶ್ವರಪ್ಪ, ಕಾಂತರಾಜ್, ಜಯರಾಂ, ಲಕ್ಷ್ಮಣ, ನಾಗರಾಜ್ ಉಪಸ್ಥಿತರಿದ್ದರು.