×
Ad

ಹನೂರು: ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ವಿರೋಧಿಸಿ ಧರಣಿ

Update: 2019-03-01 17:32 IST

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದಿಂದ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿರುವ 90 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ವಿರೋಧಿಸಿ ನಡೆಸುತ್ತಿದ್ದ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ನಿರತರು ಉಪಾವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಧರಣಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸದಿರುವುದಕ್ಕೆ ಪ್ರತಿಭಟನಾ ನಿರತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ರಾತ್ರಿಯಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದು, ಯಾವ ಅಧಿಕಾರಿಗಳಿಗೂ ನಮ್ಮ ಕೂಗು ಕೇಳಲಿಲ್ಲವೆ? ಚುಣಾವಣೆ ಬಂದಾಗ ಮಾತ್ರ ನಮ್ಮ ಬಳಿ ಬರುವ ಜನ ಪ್ರತಿನಿಧಿಗಳು ಸಮಸ್ಯೆಗಳು ಬಂದಾಗ ನಮ್ಮ ಹತ್ತಿರ ಬರುವುದಿಲ್ಲ. 400 ಕುಟುಂಬಗಳು ಬೀದಿಗೆ ಬರಲು ಜನಪ್ರತಿನಿಧಿಗಳೆ ಕಾರಣರಾಗಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಕಳೆದ ಪ್ರತಿಭಟನೆಯಿಂದಾಗಿ ನಮಗೆ ಬೀದಿಬದಿಗಳಲ್ಲಿ ವ್ಯಾಪಾರ ಮಾಡಲು 3 ದಿನಗಳ ಕಾಲ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು ಇದರಿಂದಾಗಿ ಉಳಿದ ನಾಲ್ಕು ದಿನಗಳ ಕಾಲ ಸಾಲ ಮಾಡಿ ಜೀವನವನ್ನು ಸಾಗಿಸುವ ಪ್ರಮೇಯ ಎದುರಾಗಿದ್ದು, ನಮಗೆ ಜೀವನವೇ ಬೇಡ ಎನ್ನುವಂತಾಗಿದೆ. ಮುಂದೆ ಪ್ರತಿ ದಿನವೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಬಿ.ಗೋವಿಂದ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News