×
Ad

ಪಟಾಕಿ ಸಿಡಿಸಿ ಸಂಭ್ರಮಿಸಿದಕ್ಕೆ ಸಾಕ್ಷ್ಯವಿಲ್ಲ: ಎಸ್‍ಪಿ ಡಾ.ಸುಮನ್ ಪನ್ನೇಕರ್ ಸ್ಪಷ್ಟನೆ

Update: 2019-03-01 21:31 IST

ಮಡಿಕೇರಿ, ಮಾ.1: ಪಟಾಕಿ ಸಿಡಿಸಿ ಯೋಧರ ಬಲಿದಾನವನ್ನು ಸಂಭ್ರಮಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಫೆ.20ರಂದು ದಾಖಲಾಗಿದ್ದ ಆರೋಪಿಯ ವಿರುದ್ದ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸದೇ ಕೂಲಂಕುಷ ತನಿಖೆ ಮುಂದುವರಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ. 

ಈ ಪ್ರಕರಣದಲ್ಲಿ ಉಮೇಶ್ ಎಂಬವರು ಆರೋಪಿಯ ವಿರುದ್ದ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆರೋಪಿ ಪುಲ್ವಾಮ ದುರಂತವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ತಿಳಿಸಲಾಗಿತ್ತು. ಈ ಕುರಿತು ಸೋಮವಾರಪೇಟೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. ಆದರೆ ಆರೋಪಿ ಆ ದಿನದಂದು ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಮಾತ್ರವಲ್ಲದೇ ಪ್ರಕರಣ ನಡೆದು 5 ದಿನಗಳ ಬಳಿಕ ದೂರುದಾರರು ಪ್ರಕರಣ ದಾಖಲಿಸಿದ್ದಾರೆ. ಪಟಾಕಿ ಸಿಡಿಸಿದ ಪ್ರಕರಣ ನಡೆದ ಬಳಿಕ ಆರೋಪಿಸಲಾದ ವ್ಯಕ್ತಿ ಕುಶಾಲನಗರಕ್ಕೆ ತೆರಳಿದ್ದರು. 

ಆ ದಿನದಂದು ಆರೋಪಿಯ ಮನೆಗೆ ನೆಂಟರು ಬಂದಿದ್ದು, ಮನೆಯಲ್ಲಿದ್ದ ಮಕ್ಕಳು ಶಬ್ದ ಹೊರಡಿಸದ ಪಟಾಕಿ ಸಿಡಿಸಿರುವದು ಕಂಡು ಬಂದಿದೆ. ಹೂಕುಂಡ ಪಟಾಕಿ, ಸುರುಸುರು ಬತ್ತಿಯಂತಹ ಪಟಾಕಿಗಳ ಅವಶೇಷಗಳು ತನಿಖೆಯ ವೇಳೆ ಸ್ಥಳದಲ್ಲಿ ಪತ್ತೆಯಾಗಿದೆ. ಮಾತ್ರವಲ್ಲದೇ, ಹೆಚ್ಚಿನ ತನಿಖೆ ನಡೆಸಿದ ಸಂದರ್ಭ ಸುತ್ತ ಮುತ್ತಲಿನ ನಿವಾಸಿಗಳು ಕೂಡ ಪಟಾಕಿಯ ಶಬ್ದ ಕೇಳಿಸಲಿಲ್ಲ ಎಂದು ತಿಳಿಸಿದ್ದಾರೆ. 

ಮೇಲ್ನೋಟಕ್ಕೆ ಇದು ಸಂಭ್ರಮಕ್ಕಾಗಿ ಸಿಡಿಸಲಾದ ಪಟಾಕಿಗಳು ಅಲ್ಲ ಎಂಬುದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸದೇ ಕೂಲಂಕುಷ ತನಿಖೆಯನ್ನು ಮುಂದುವರಿಸಲಾಗಿದೆ. ಆದರೆ ತನಿಖೆಯ ಸಂದರ್ಭ ಉದ್ದೇಶ ಪೂರ್ವಕವಾಗಿ ದೂರು ದಾಖಲಿಸಿರುವುದು ಕಂಡು ಬಂದರೆ ದೂರುದಾರರ ವಿರುದ್ದವೂ ಕ್ರಮ ಜರುಗಿಸಲಾಗುತ್ತದೆ ಎಂದೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News