‘ವಕ್ಫ್ ಬೋರ್ಡ್ ಚುನಾವಣೆ’ ಕಣದಿಂದ ಹಿಂದಕ್ಕೆ ಸರಿದ ರಿಝ್ವಾನ್ ಅರ್ಶದ್
ಬೆಂಗಳೂರು, ಮಾ.1: ರಾಜ್ಯ ವಕ್ಫ್ ಮಂಡಳಿಗೆ ಶನಿವಾರ(ಮಾ.2) ನಡೆಯಲಿರುವ ಚುನಾವಣೆಯ ಕಣದಿಂದ ಹಿಂದಕ್ಕೆ ಸರಿಯಲು ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಶದ್ ನಿರ್ಧರಿಸಿದ್ದಾರೆ.
ಶುಕ್ರವಾರ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಕ್ಫ್ ಮಂಡಳಿಗೆ ಶಾಸಕಾಂಗ ವಿಭಾಗದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ನಾನು, ಗುಲ್ಬರ್ಗ ಉತ್ತರ ಕ್ಷೇತ್ರದ ಶಾಸಕಿ ಕನಿಝ್ ಫಾತಿಮಾ, ಹಾಗೂ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ನಾಮಪತ್ರ ಸಲ್ಲಿಸಿದ್ದರು.
ಫೆ.18ರಂದು ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಯಾರೊಬ್ಬರೂ ನಾಮಪತ್ರ ಹಿಂಪಡೆಯದೆ ಇದ್ದುದರಿಂದ, ಚುನಾವಣೆ ಅನಿವಾರ್ಯವಾಗಿತ್ತು. ಈ ನಡುವೆ ತನ್ವೀರ್ ಸೇಠ್, ವಕ್ಫ್ ಮಂಡಳಿಯ ಸದಸ್ಯನಾಗಿ ವಕ್ಫ್ ಆಸ್ತಿಗಳ ಶ್ರೇಯೋಭಿವೃದ್ಧಿ ಹಾಗೂ ಸಮುದಾಯದ ಸೇವೆ ಮಾಡಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಆದುದರಿಂದ, ಹಿರಿಯರಾದ ತನ್ವೀರ್ ಸೇಠ್ ಅವರಿಗೆ ಅವಕಾಶ ಕಲ್ಪಿಸಿಕೊಡಲು ಹಾಗೂ ಮುಂದಿನ ಲೋಕಸಭಾ ಚುನಾವಣೆಗಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗಿರುವುದರಿಂದ, ನಾನು ವಕ್ಫ್ ಮಂಡಳಿಯ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.