×
Ad

ಕೆಎಂಡಿಸಿ ಅಧ್ಯಕ್ಷರಾಗಿ ಝಫ್ರುಲ್ಲಾಖಾನ್ ಅಧಿಕಾರ ಸ್ವೀಕಾರ

Update: 2019-03-01 22:09 IST

ಬೆಂಗಳೂರು, ಮಾ.1: ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷರಾಗಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫ್ರುಲ್ಲಾ ಖಾನ್, ಶುಕ್ರವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ಆಯೋಗದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಝಫ್ರುಲ್ಲಾಖಾನ್, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ತನ್ನ ಮೇಲೆ ವಿಶ್ವಾಸವಿಟ್ಟು, ಈ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ರಾಜ್ಯದಲ್ಲಿರುವ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು ಹಾಗೂ ಪಾರ್ಸಿಗಳಿಗೆ ರಾಜ್ಯ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ. ಇವತ್ತು ಅಧಿಕಾರ ಸ್ವೀಕರಿಸಿದ್ದು, ಶೀಘ್ರದಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸುತ್ತೇನೆ ಎಂದು ಅವರು ಹೇಳಿದರು.

ಝಫ್ರುಲ್ಲಾಖಾನ್‌ರನ್ನು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್, ಮಾಜಿ ಸಚಿವರಾದ ಆರ್.ರೋಷನ್ ಬೇಗ್, ತನ್ವೀರ್ ಸೇಠ್, ಮೌಲಾನ ಮಖ್ಸೂದ ಇಮ್ರಾನ್ ರಶಾದಿ, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಕೋನರೆಡ್ಡಿ, ಜೆಡಿಎಸ್ ಹಿರಿಯ ಉಪಾಧ್ಯಕ್ಷ ಶಫೀವುಲ್ಲಾ, ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ಇಸ್ಲಾಹುದ್ದೀನ್ ಗದ್ಯಾಲ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News