ಭಾರತಕ್ಕೆ ಅಭಿನಂದನ್
ಎರಡು ದಿನಗಳ ಕಾಲ ಪಾಕಿಸ್ತಾನದ ಸೆರೆಯಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕ್ ಸೇನೆ ಶುಕ್ರವಾರ ಭಾರತಕ್ಕೆ ಹಸ್ತಾಂತರಿಸಿದೆ. ಅಭಿನಂದನ್ ರಾತ್ರಿ 9:15ಕ್ಕೆ ವಾಘಾಗಡಿಯಲ್ಲಿ ಕಾಲಿಡುತ್ತಿದ್ದಂತೆಯೇ, ಅಲ್ಲಿ ನೆರೆದಿದ್ದ ಸಾವಿರಾರು ಭಾರತೀಯರ ಸಂಭ್ರಮ ಮುಗಿಲುಮುಟ್ಟಿತು. ಎಲ್ಲೆಡೆ ಭಾರತದ ಧ್ವಜಗಳನ್ನು ಬೀಸುತ್ತಿದ್ದ ನಾಗರಿಕರು ಅಭಿನಂದನ್‌ಗೆ ಸ್ವಾಗತ ಕೋರಿ ಘೋಷಣೆಗಳನ್ನು ಕೂಗಿದರು.ಅಭಿನಂದನ್ ಆಗಮನದ ನಿರೀಕ್ಷೆಯೊಂದಿಗೆ ಇಂದು ಬೆಳಗ್ಗಿನಿಂದಲೇ ವಾಘಾಗಡಿಯಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಅಭಿನಂದನ್ ಅವರ ಹಸ್ತಾಂತರದೊಂದಿಗೆ ಅವರ ಬಿಡುಗಡೆಯ ಬಗ್ಗೆ ಉಂಟಾಗಿದ್ದ ಆತಂಕದ ವಾತಾವರಣಕ್ಕೆ ಕೊನೆಗೂ ತೆರೆಬಿದ್ದಿದೆ. ಭಾರತದ ಜನತೆ ಕಾತರದಿಂದ ಕಾಯುತ್ತಿ ದ್ದಂತೆಯೇ, ರಾತ್ರಿ 9:15ರ ವೇಳೆಗೆ ಭಾರತ- ಪಾಕಿಸ್ತಾನವನ್ನು ಪ್ರತ್ಯೇಕಿಸುವ ವಾಘಾ-ಅಟಾರಿ ಗಡಿಯಲ್ಲಿ ಪಾಕ್ ಅಧಿಕಾರಿಗಳು ಅಭಿನಂದನ್‌ರನ್ನು ಹಸ್ತಾಂತರಿಸಿದರು. ಅವರನ್ನು ಗಡಿಭದ್ರತಾ ಪಡೆಯ(ಬಿಎಸ್‌ಎಫ್) ಅಧಿಕಾರಿಗಳು ಬರಮಾಡಿ ಕೊಂಡರು.