×
Ad

ನಾನು ಬೇರೆ ಜಾತಿಯವನಾಗಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು: ಕೆಎಚ್‌ಬಿ ನೂತನ ಅಧ್ಯಕ್ಷ ಶಿವಲಿಂಗೇಗೌಡ

Update: 2019-03-01 23:36 IST

ಬೆಂಗಳೂರು, ಮಾ. 1: ‘ಒಕ್ಕಲಿಗನಲ್ಲದೆ ಬೇರೆ ಜಾತಿಯವನಾಗಿದ್ದರೆ ನನಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ದೊರೆಯುತ್ತಿತ್ತು’ ಎಂದು ಅರಸೀಕರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಕಾವೇರಿ ಭವನದಲ್ಲಿ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೈತ್ರಿ ಸರಕಾರ ಅತಂತ್ರ ಸ್ಥಿತಿಯಲ್ಲಿದೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ಸಿಗುವುದು ಕಷ್ಟಸಾಧ್ಯ ಎಂದು ತಿಳಿಸಿದರು.

ಹಾಸನ ಜಿಲ್ಲೆಯಿಂದ ಈಗಾಗಲೇ ಎಚ್.ಡಿ.ರೇವಣ್ಣ ಸಚಿವರಾಗಿದ್ದು, ರೇವಣ್ಣ ಅವರಿದ್ದ ಮೇಲೆ ಅಲ್ಲಿ ಬೇರೆಯವರು ಸಚಿವರಾಗುವುದು ಸರಿಯಲ್ಲ. ಅಲ್ಲದೆ, ಒಕ್ಕಲಿಗ ಸಮುದಾಯದ ಹಲವು ಮಂದಿ ಸಚಿವರಾಗಿದ್ದು, ತಾವೂ ಒಕ್ಕಲಿಗನಾಗಿದ್ದರಿಂದ ಸಚಿವ ಸ್ಥಾನ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನಗೂ ಸಚಿವನಾಗುವ ಬಯಕೆ ಇತ್ತು. ಆದರೆ ಮೈತ್ರಿ ಸರಕಾರದಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ, ಗೃಹ ಮಂಡಳಿ ಅಧ್ಯಕ್ಷನಾಗಿ ಸಚಿವರಿಗಿಂತಲೂ ಉತ್ತಮವಾಗಿ ಕೆಲಸ ಮಾಡಬಹುದು. ವಸತಿ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಅಧಿಕಾರ ಸ್ವೀಕಾರದ ಬಗ್ಗೆ ಮಾಹಿತಿ ನೀಡಿದ್ದೆ. ಎಂಟಿಬಿ ಹಾಗೂ ತಮ್ಮ ಅಥವಾ ಮೈತ್ರಿ ಸರಕಾರದ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಹಾಸನ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಥವಾ ಪ್ರಜ್ವಲ್ ರೇವಣ್ಣ ಇಬ್ಬರಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ದೇವೇಗೌಡರು ಯಾರ ಪರ ಕೆಲಸ ಮಾಡಲು ಹೇಳಿದರೂ ನಾನು ಸಿದ್ಧ ಎಂದರು.

ಗೃಹ ಮಂಡಳಿಗೆ ಇತಿಹಾಸವಿದ್ದು, ಸೂರಿಲ್ಲದವರಿಗೆ ಸೂರು ಕಲ್ಪಿಸುವ ಉತ್ತಮ ಸಂಸ್ಥೆ ಇದಾಗಿದೆ. ಕಾನೂನು ಚೌಕಟ್ಟಿನೊಳಗೆ ನಿವೇಶನ ಹಂಚಿಕೆ, ವಸತಿ ಸಂಕೀರ್ಣ ನಿರ್ಮಾಣಕ್ಕೆ ಗಮನಹರಿಸಲಾಗುವುದು. ಮಂಡಳಿಯಲ್ಲಿ ಒಳ್ಳೆಯ ಕೆಲಸ ಮಾಡುವ ಅಭಿಲಾಷೆ ಇದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News