ಬಂಡೀಪುರದಲ್ಲಿ ಕಾಡ್ಗಿಚ್ಚು: ಮತ್ತಿಬ್ಬರು ಆರೋಪಿಗಳ ಬಂಧನ

Update: 2019-03-02 13:39 GMT

ಚಾಮರಾಜನಗರ,ಮಾ.2: ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿಯಿಟ್ಟ ಆರೋಪದ ಮೇಲೆ ಇನ್ನಿಬ್ಬರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಚೌಡಹಳ್ಳಿ ಗ್ರಾಮದ ಹನುಮಂತಯ್ಯ(70) ಹಾಗೂ ಗೋಪಯ್ಯ(60) ಎಂಬ ಕುರಿಗಾಹಿಗಳು ಬಂಧಿತ ಆರೋಪಿಗಳು.

ಕಳೆದ ಹದಿನೈದು ದಿನಗಳ ಹಿಂದೆ ಗ್ರಾಮದ ಕುಮಾರ್ ಎಂಬವರ ಬಾಳೆಯ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿತ್ತು. ಸೆರೆ ಕಾರ್ಯಾಚರಣೆ ಪ್ರಾರಂಭಿಸಿ ಸತತ ಮೂರು ದಿನಗಳ ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಿರಲಿಲ್ಲ. ಬಳಿಕ ಹುಲಿಯು ಸಮೀಪದ ಹಳ್ಳದಲ್ಲಿ ಅಡಗಿ ಸಾಕುಪ್ರಾಣಿಗಳನ್ನು ಕೊಂದುಹಾಕುತ್ತಿದೆ ಎಂಬ ವದಂತಿ ಹರಡಿತ್ತು.

ಶುಕ್ರವಾರ ಮಧ್ಯಾಹ್ನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತ್ತೀಚೆಗೆ ಈ ಭಾಗದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದರಿಂದ ತಮ್ಮ ಕುರಿಗಳನ್ನು ತಿಂದು ಹಾಕುತ್ತವೆ ಎಂಬ ಭೀತಿಯಿಂದ ಅರಣ್ಯಕ್ಕೆ ಬೆಂಕಿಯಿಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಆರೋಪಿಗಳನ್ನು ರಾತ್ರಿ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇಬ್ಬರನ್ನೂ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗೋಪಾಲಸ್ವಾಮಿಬೆಟ್ಟ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈಗಾಗಲೇ ಕಳ್ಳೀಪುರದ ಅರುಣ್ ಕುಮಾರ್ ರನ್ನು ಬೆಂಕಿ ಹಾಕಿದ ಆರೋಪದಲ್ಲಿ ಬಂಧಿಸಿದ್ದು, ಅವರನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News