ಕುಮಾರಸ್ವಾಮಿಗೆ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಯುಕೆಎಸ್‌ಎಸ್‌ಎಂಎಸ್

Update: 2019-03-02 14:23 GMT

ಬೆಂಗಳೂರು, ಮಾ.2: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದೇ ಪದೆ ನಾನು ದಕ್ಷಿಣ ಕರ್ನಾಟಕದ ಮುಖ್ಯಮಂತ್ರಿ ಮಾತ್ರ ಎಂಬುದನ್ನು ಅಧಿಕೃತಗೊಳಿಸುತ್ತಿದ್ದಾರೆ, ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್.ಶಿವಕುಮಾರ ಮೇಟಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕಡೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಅಲ್ಲದೆ, ಅವರು ಇಡೀ ರಾಜ್ಯದ ಮಂತ್ರಿಯೋ ಅಥವಾ ಹಳೇ ಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯೋ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಊರುಗಳಲ್ಲಿ ಇನ್ನೂ ಸರಿಯಾಗಿ ಮೂಲ ಸೌಕರ್ಯ ಒದಗಿಸಿಲ್ಲ. ಅಲ್ಲಿನ ಜನತೆ ಅಭಿವೃದ್ಧಿಯ ಆಶಾ ಗೋಪುರಗಳ ನಂಬಿಕೆ ಇಟ್ಟುಕೊಂಡು ಅಭ್ಯರ್ಥಿಗಳನ್ನು ಗೆಲಿಸುತ್ತಾರೆ. ಆದರೆ, ಜನಪ್ರತಿನಿಧಿಗಳಿಗೆ ಜನರ ಮೂಲಭೂತ ಸಮಸ್ಯೆಗಳ ಅರಿವೇ ಇಲ್ಲ. ಒಮ್ಮೆ ಸಿಎಂ ತವರೂರನ್ನು ನಮ್ಮ ಮಂತ್ರಿಗಳು, ಶಾಸಕರು ಹೋಗಿ ನೋಡಿಕೊಂಡು ಬರಲಿ ಎಂದು ಸಲಹೆ ಮಾಡಿದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಉತ್ತರ ಕರ್ನಾಟಕಕ್ಕೆ ಓಟಿಗಾಗಿ ಬರತ್ತಾರೆಯೇ ಹೊರತು, ಅಭಿವೃದ್ಧಿ ದೃಷ್ಟಿಯಿಂದ ಬರುವುದಿಲ್ಲ. ಜನರಿಗೆ ಮೊದಲು ಕುಡಿಯಲು ನೀರನ್ನು ಒದಗಿಸಿ. ನಂತರ ನಿಮ್ಮ ರಾಜಕೀಯ ಹಿತಾಸಕ್ತಿಯನ್ನು ಉಪಯೋಗಿಸಿ ಪ್ರಾದೇಶಿಕ ಅಸಮತೋಲನವನ್ನು ತೊಲಗಿಸಿ ಎಂದು ಮನವಿ ಮಾಡಿದರು.

ಉತ್ತರ ಕರ್ನಾಟಕವನ್ನು ಕಡೆಗಣಿಸಿದರೆ 37 ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳು ಈ ಮಹಾ ಸಂಸ್ಥೆಯ ಮೂಲಕ ಪರ್ಯಾಯ ಬಲಿಷ್ಠ ನಾಯಕನತ್ತ ಗಮನ ಹರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News