ದೀನ್‌ದಯಾಳ್ ಉಪಾಧ್ಯಾಯ ಯೋಜನೆಯಿಂದ ದೇಶದ ಕತ್ತಲೆ ದೂರ: ಶೋಭಾ ಕರಂದ್ಲಾಜೆ

Update: 2019-03-02 17:31 GMT

ಚಿಕ್ಕಮಗಳೂರು, ಮಾ.2: ದೇಶದಲ್ಲಿ ವಿದ್ಯುತ್ ಸಂಪರ್ಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ, ಕೇಂದ್ರ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಪಂಡಿತ್ ದೀನದಯಾಳ ಉಪಾಧ್ಯಾಯ ಯೋಜನೆಯಿಂದ ದೇಶದ ಕತ್ತಲೆ ದೂರವಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದ ವಿದ್ಯುತ್ ಪ್ರಸರಣ ನೌಕರರ ಸಂಘದ ಸಮುದಾಯ ಭವನದಲ್ಲಿ ಶನಿವಾರ ಮೆಸ್ಕಾಂ ವತಿಯಿಂದ ಹಮ್ಮಿಕೊಳ್ಳಲಾದ ದೀನ್‌ದಯಾಳ್ ಉಪಧ್ಯಾಯ ಗ್ರಾಮ ಜ್ಯೋತಿ ಯೋಜನೆ ಹಾಗೂ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಗಳನ್ನು ಚಾಲನೆಗೊಳಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು ಹದಿನೆಂಟು ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಗಮನಿಸಿದ ಕೇಂದ್ರ ಸರಕಾರ ದೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಲೈನ್ ಹಾದು ಹೋಗಿರುವ ಕಡೆಗಳಲ್ಲಿ ಮರಗಳ ರೆಕ್ಕೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಅಧಿಕಾರಿಗಳು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಶಾಸಕ ಸಿ.ಟಿ.ರವಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ನೂರಕ್ಕೆ ನೂರರಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ, ಜಿಪಂ ಸದಸ್ಯ ಸೋಮಶೇಖರ್, ಜಸಿಂತಾ ಅನಿಲ್‌ಕುಮಾರ್, ತಾಪಂ ಸದಸ್ಯೆ ಅರ್ಪಿತಾ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಹಾಗೂ ಮೆಸ್ಕಾಂ ಇಲಾಖೆ ಹಿರಿಯ, ಕಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News