ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧವೇ ಬೇರೆ: ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು,ಮಾ.2: ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧವೇ ಬೇರೆ. ನಾನು ಮನುಷ್ಯ ಸಂಬಂಧಕ್ಕೆ ಬೆಲೆಕೊಡುವವನು. ಹಾಗಾಗಿ ಯಡಿಯೂರಪ್ಪ ಅವರು ಎಲ್ಲಿ ಕಂಡರೂ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುತ್ತೂರಿನಲ್ಲಿ ನಡೆಯುತ್ತಿರುವ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶನಿವಾರ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಟ್ಟಿಗೆ ಭಾಗವಹಿಸಿದ್ದರು. ಈ ವೇಳೆ ಮಾತು ಆರಂಭಿಸಿದ ಸಿದ್ದರಾಮಯ್ಯ, ನಾನು ಮತ್ತು ಯಡಿಯೂರಪ್ಪ ಒಂದೇ ಕಡೆ ಕಾಣಿಸಿಕೊಂಡು ಮಾತನಾಡಿದರೆ ಮಾಧ್ಯಮದವರು ಅದನ್ನೆ ದೊಡ್ಡ ಸುದ್ದಿಯಾಗಿ ಮಾಡುತ್ತಾರೆ. ನಾನು ಮತ್ತು ಅವರು ರಾಜಕೀಯ ವಿರೋಧಿಗಳಿರಬಹುದು, ಆದರೆ ಮನುಷ್ಯ ಸಂಬಂಧಕ್ಕೆ ಬೆಲೆಕೊಡುವವರು, ಪರಸ್ಪರ ಪ್ರೀತಿಸುವ ಗುಣ ಹೊಂದಿದ್ದರಿಂದಲೇ ನಾನು ಅವರು ಎಲ್ಲಿ ಸಿಕ್ಕಿದರೂ ಮಾತನಾಡುತ್ತೇವೆ ಎಂದು ಹೇಳಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಶಾಶ್ವತವಾಗಿ ಯಾರು ಸ್ನೇಹಿತರೂ ಅಲ್ಲ, ರಾಜಕೀಯ ವೈರಿಗಳೂ ಅಲ್ಲ ಎಂದು ಹೇಳುತ್ತಿದ್ದರು. ರಾಜಕಾರಣದಲ್ಲಿ ಯಾರೂ ಶತ್ರುಗಳೂ ಇಲ್ಲ, ಸ್ನೇಹಿತರೂ ಇಲ್ಲ, ಮನುಷ್ಯ ಸಂಬಂಧಕ್ಕೆ ನಾವು ಬೆಲೆ ಕೊಡಬೇಕು ಎಂದು ಹೇಳಿದರು.
ಕಳೆದ ವಾರ ನಾನು ಮತ್ತು ಯಡಿಯೂರಪ್ಪ ಹುಬ್ಬಳಿ ಏರ್ ಪೋರ್ಟ್‍ನಲ್ಲಿ ಭೇಟಿಯಾಗಿದ್ದೆವು. ಆದಕ್ಕೆ ಮಾಧ್ಯಮಗಳು ನಾನಾ ಅರ್ಥಗಳನ್ನು ಕಲ್ಪಿಸಿ, ಸಿದ್ದರಾಮಯ್ಯ ಯಡಿಯೂರಪ್ಪ ರಾಜಕೀಯ ಚರ್ಚೆ ನಡೆಸಿದ್ದಾರೆ ಎಂಬ ಸುದ್ದಿಗಳನ್ನು ಮಾಡಿದರು. ಆದರೆ ನಾನು ಮತ್ತು ಯಡಿಯೂರಪ್ಪ ಭೇಟಿಯಾಗಿ ನೀವು ಚೆನ್ನಾಗಿದ್ದೀರ, ನಾವು ಚೆನ್ನಾಗಿದ್ದೇವೆ ಎಂಬ ಮಾತುಗಳನ್ನಷ್ಟೇ ಆಡಿದ್ದೆವು. ಈಗಲೂ ಅಷ್ಟೆ ನಾವು ಯಾವುದೇ ರಾಜಕಾರಣ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.