ಯುನಿಸೆಫ್ ನಿಂದ ಪ್ರಿಯಾಂಕಾ ಚೋಪ್ರಾರನ್ನು ವಜಾಗೊಳಿಸಲು ಪಾಕ್ ನಲ್ಲಿ ಆನ್‌ಲೈನ್ ಅಭಿಯಾನ !

Update: 2019-03-03 14:30 GMT

ಮುಂಬೈ,ಮಾ.3: ನಟಿ ಪ್ರಿಯಾಂಕಾ ಚೋಪ್ರಾರನ್ನು ಯುನಿಸೆಫ್‌ನ ಸದಾಶಯ ರಾಯಭಾರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಪಾಕಿಸ್ತಾನದಲ್ಲಿ ಆನ್‌ ಲೈನ್ ಅಭಿಯಾನ ಆರಂಭವಾಗಿದೆ. ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಭಾರತೀಯ ವಾಯುಪಡೆಯನ್ನು ಪ್ರಿಯಾಂಕಾ ಅಭಿನಂದಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಸದಾಶಯ ರಾಯಭಾರಿ ಸ್ಥಾನದಿಂದ ಕೆಳಗಿಳಿಸುವಂತೆ ಪಾಕಿಸ್ತಾನದ ಆವಾಝ್ ಎಂಬ ಆನ್‌ಲೈನ್ ವೇದಿಕೆ ಮನವಿ ಮಾಡಿಕೊಂಡಿದೆ.

ಪಾಕಿಸ್ತಾನದ ಖೈಬರ್-ಫಕ್ತುಂಖ್ವಾ ಪ್ರಾಂತದ ಬಾಲಕೋಟ್‌ ನಲ್ಲಿದ್ದ ಜೈಶೆ ಮುಹಮ್ಮದ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಫೆಬ್ರವರಿ 26ರಂದು ಪ್ರಿಯಾಂಕಾ ಐಎಎಫ್ ‌ಅನ್ನು ಅಭಿನಂದಿಸಿದ್ದರು. ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೈಶೆ ಮುಹಮ್ಮದ್ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ ಪಿಎಫ್‌ ನ 40 ಯೋಧರು ಹುತಾತ್ಮರಾದ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದಿಗ್ನತೆ ತಲೆದೋರಿತ್ತು.

ಪರಮಾಣು ಸಾಮರ್ಥ್ಯದ ಎರಡು ರಾಷ್ಟ್ರಗಳ ಮಧ್ಯೆ ನಡೆಯುವ ಯುದ್ಧ ವಿನಾಶ ಮತ್ತು ಸಾವುನೋವುಗಳನ್ನು ತರುತ್ತದೆ. ಯುನಿಸೆಫ್ ಸದಾಶಯ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ ತಟಸ್ಥ ಮತ್ತು ಶಾಂತವಾಗಿ ಉಳಿಯಬೇಕಿತ್ತು. ಆದರೆ ಭಾರತೀಯ ವಾಯುಪಡೆ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ದಾಳಿ ನಡೆಸಿದ ನಂತರ ಆಕೆ ಮಾಡಿದ ಟ್ವೀಟ್ ಬೇರೆಯದನ್ನೇ ಹೇಳುತ್ತದೆ. ಹಾಗಾಗಿ ಆಕೆ ಈ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಶ್ವಸಂಸ್ಥೆ ಮತ್ತು ಯುನಿಸೆಫನ್ನು ಕುರಿತು ಸಲ್ಲಿಸಲಾಗಿರುವ ಈ ಮನವಿಗೆ ಈಗಾಗಲೇ 3,519 ಮಂದಿ ಸಹಿ ಹಾಕಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News