ಯಾರು ಏನೇ ಹೇಳಿದರೂ ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತೇನೆ: ಸುಮಲತಾ ಸ್ಪಷ್ಟನೆ
ಮಂಡ್ಯ, ಮಾ.4: ಯಾರು ಏನೇ ಹೇಳಿದರೂ ಬೇರೆ ಕಡೆ ಸ್ಪರ್ಧೆ ಮಾಡಲ್ಲ. ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತೇನೆ. ಎಂಎಲ್‍ಸಿ ಆಫರ್ ವಿಚಾರ ಹೀಗಿನದ್ದಲ್ಲ, ಈಗಾಗಲೇ ಎರಡು ಬಾರಿ ಬಂದಿದೆ. ಎಂಟು ತಿಂಗಳ ಹಿಂದೆ, ಮೂರು ತಿಂಗಳ ಹಿಂದೆಯೇ ಬಂದಿತ್ತು. ಆಗಲೇ ನಾನು ಆ ಆಫರ್ ನಿರಾಕರಿಸಿದ್ದೆ ಎಂದು ದಿವಂಗತ ಅಂಬರೀಶ್ ಪತ್ನಿ, ನಟಿ ಸುಮಲತಾ ಪುನರುಚ್ಚರಿಸಿದ್ದಾರೆ.
ಲೋಕಸಭೆ ಚುನಾವಣೆ ಸ್ಪರ್ಧೆ ಸಂಬಂಧ ಸೋಮವಾರವೂ ಕಾಂಗ್ರೆಸ್ ಮುಖಂಡರು ಹಾಗು ಅಂಬರೀಶ್ ಅಭಿಮಾನಿಗಳ ಭೇಟಿ ಕಾರ್ಯಕ್ರಮ ಮುಂದುವರಿಸಿದ ಅವರು, ಸ್ಪರ್ಧೆಯಿಂದ ಹಿಂದೆ ಸರಿದರೆ ಸಚಿವ ಸ್ಥಾನ ಕೊಡುವ ವಿಚಾರ ಊಹಾಪೋಹ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದೇ ಆಮಿಷಗಳಿಗೂ ಒಳಗಾಗಲ್ಲ ಎಂದರು.
ಅಂಬಿ ಅಭಿಮಾನಿಗಳ ಅಭಿಮಾನದಿಂದ ನಾನಿಂದು ರಾಜಕೀಯಕ್ಕೆ ಬಂದೆ. ಮಂಡ್ಯ ಜನರ ಪ್ರೀತಿ, ಅಭಿಮಾನ ಸಾಮಾನ್ಯವಾದುದದಲ್ಲ. ಅಂಬಿ ಇದ್ದಾಗಲೂ ಅವರು ಹೋದ ಮೇಲೂ ಅದೇ ಅಭಿಮಾನ ಮಂಡ್ಯ ಜನರಲ್ಲಿ ಇದೆ. ಅಂಬಿ ಸಂಪಾದಿಸಿರುವ ಅಭಿಮಾನಿಗಳ ಪ್ರೀತಿಗೆ ಸೋತು ಈಗ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಸೋಲು ಗೆಲುವು ಇದ್ದೇ ಇರುತ್ತೆ. ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಅಂಬಿ ಯಾವತ್ತೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಇಂದಿನ ಯಾವ ರಾಜಕಾರಣಿಗಳಲ್ಲೂ ಆ ನಿಸ್ವಾರ್ಥ ರಾಜಕಾರಣ ಕಾಣುತ್ತಿಲ್ಲ. ಅಂಬಿ ಜಿಲ್ಲೆಗೆ ಕೊಡುಗೆ ಏನು ಎಂಬ ವಿಚಾರದ ಬಗ್ಗೆ ನಾನು ಮಾತನಾಡಲ್ಲ, ಅದನ್ನ ಜನರೇ ಮಾತಾಡುತ್ತಾರೆ. ಅವರ ಸಾಧನೆಗಳನ್ನು ಹೇಳೋಕೆ ಇಡೀ ದಿನ ಇಲ್ಲೆ ಇರಬೇಕಾಗುತ್ತದೆ. ಅಂಬಿಗೆ ದೇವೇಗೌಡರ ಬಗ್ಗೆ ವಿಶೇಷವಾದ ಪ್ರೀತಿ ಇತ್ತು. ಅವರಿಗೂ ಇವರ ಮೇಲೆ ಅಭಿಮಾನವಿತ್ತು. ನಾನು ಯಾವತ್ತು ದ್ವೇಷದ ರಾಜಕಾರಣ ಮಾಡುವುದಿಲ್ಲ. ಮಂಡ್ಯದಲ್ಲೇ ನಮ್ಮ ನಿವೇಶನವಿದ್ದು, ಅಲ್ಲೇ ಮನೆ ಕಟ್ಟುವ ಆಲೋಚನೆ ಇದೆ ಎಂದೂ ಅವರು ತಿಳಿಸಿದರು.
ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದ ಸುಮಲತಾ, ನಂತರ ಕನಕ ಭವನದಲ್ಲಿ ನಡೆದ ಸಭೆಯಲ್ಲಿ ಒಗ್ಗಟ್ಟಾಗಿ ನಿಮ್ಮೆಲ್ಲರ ಸಹಕಾರ, ನಿಮ್ಮ ಬೆಂಬಲ ಇರಲಿ ಎಂದು ಕಾಂಗ್ರೆಸ್ ಮುಖಂಡರು ಹಾಗು ಅಭಿಮಾನಿಗಳಿಗೆ ಮನವಿ ಮಾಡಿದರು.