×
Ad

ಮಂಡ್ಯದ ಜನತೆಗಾಗಿ ಶ್ರಮಿಸುವ ಪಣತೊಟ್ಟು ಬಂದಿದ್ದೇನೆ: ನಿಖಿಲ್‍ ಕುಮಾರಸ್ವಾಮಿ

Update: 2019-03-04 21:24 IST

ಮಂಡ್ಯ, ಮಾ.4: ರಾಜಕಾರಣದಲ್ಲಿ ನನಗೆ ಅನುಭವ ಕಡಿಮೆ, ಆದರೆ, ಮುಂದಿನ ದಿನಗಳಲ್ಲಿ ನಾನು ನನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮಂಡ್ಯ ಜಿಲ್ಲೆಯ ಜನರಿಗಾಗಿ ಹಗಲು-ರಾತ್ರಿ ಶ್ರಮಿಸುವ ಪಣತೊಟ್ಟು ಬಂದಿದ್ದೇನೆ ಎಂದು ಚಿತ್ರನಟ ನಿಖಿಲ್‍ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಹನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ 3ನೇ ಬಾರಿ ಶಾಸಕರಾಗಿ ಆಯ್ಕೆಯಾದ ಎಂ.ಶ್ರೀನಿವಾಸ್ ಅವರ ಹುಟ್ಟುಹಬ್ಬ ಆಚರಣೆ, ನೂತನ ಸಚಿವರು, ಸಂಸದರು ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ಅವರಂತೆ ಮನೆ ಮಗನಾಗಿ, ನೀವೆಲ್ಲರೂ ಆಶೀರ್ವಾದ ಮಾಡುತ್ತೀರೆಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರ ವಿಶ್ವಾಸ ಗಳಿಸಿ, ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಯುವಜನತೆ ಬೆಂಗಳೂರಿಗೆ ವಲಸೆ ಹೋಗಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಮಣ್ಣಿನ ಮಕ್ಕಳು ಜಿಲ್ಲೆಯಲ್ಲಿಯೇ ಇದ್ದುಕೊಂಡು ಕೃಷಿಯಲ್ಲಿ ಜೀವನವನ್ನು ಆರ್ಥಿಕವಾಗಿ ಭದ್ರವಾಗಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಲವು ಯೋಜನೆ ಜಾರಿ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ 37 ಸೀಟುಗಳನ್ನು ಇಟ್ಟುಕೊಂಡು ರಾಜ್ಯದ ಅಧಿಕಾರ ಪಡೆದಿದ್ದಾರೆ. ಇದಕ್ಕೆ ಮಂಡ್ಯ ಜಿಲ್ಲೆ ದೊಡ್ಡಪಾತ್ರ ವಹಿಸಿದೆ. ಜಿಲ್ಲೆಯ ಜನತೆಯ ಋಣವನ್ನು ಕೊನೆ ಉಸಿರು ಇರುವವರೆಗೂ ತೀರಿಸಲು ಸಾಧ್ಯವಿಲ್ಲ. ನೀವು ತೋರಿರುವ ಪ್ರೀತಿ, ನಂಬಿಕೆ, ವಿಶ್ವಾಸ ಇದೇ ರೀತಿ ಇರಲಿ ಎಂದು ಕೋರಿದರು.

ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಲೋಕಸಭೆ ಚುನಾವಣೆಗೆ ನಿಖಿಲ್‍ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಬೆಂಬಲ ದೊರಕಲಿದೆ. ನಾನು ಹಾಗೂ ಶಿವರಾಮೇಗೌಡರು ಸಂಸದರಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಪಥದತ್ತ ಕೊಂಡೊಯ್ದಿದ್ದೇವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಎಂ.ಶ್ರೀನಿವಾಸ್, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಅನ್ನದಾನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಝಫರುಲ್ಲಾಖಾನ್, ಶಾಸಕ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಮು, ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಸದಸ್ಯ ಎಚ್.ಎನ್.ಯೋಗೇಶ್, ತಾಪಂ ಸದಸ್ಯ ಎಚ್.ಡಿ.ಕಿರಣ್‍ಕುಮಾರ್, ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News