ಶಿವಮೊಗ್ಗ: ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ- ವಾಹನಗಳು ವಶಕ್ಕೆ

Update: 2019-03-04 18:29 GMT

ಶಿವಮೊಗ್ಗ, ಮಾ.4: ಶಿವಮೊಗ್ಗ ನಗರದ ಹೊರವಲಯ ಗೆಜ್ಜೇನಹಳ್ಳಿ, ಕಲ್ಲುಗಂಗೂರು ಗ್ರಾಮದ ಬಳಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕಲ್ಲು ಗಣಿಗರಿಕೆ ಸ್ಥಳದ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. 

ಖಚಿತ ವರ್ತಮಾನದ ಮೇರೆಗೆ ತಹಶೀಲ್ದಾರ್ ಬಿ.ಎನ್.ಗಿರೀಶ್, ಗ್ರಾಮ ಲೆಕ್ಕಾಧಿಕಾರಿ ಪ್ರಭು ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದವರು ವಾಹನಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಎರಡು ಲಾರಿ, ಒಂದು ಹಿಟಾಚಿ ಹಾಗೂ ಒಂದು ಟ್ರ್ಯಾಕ್ಟರ್ ಅನ್ನು ತಹಶೀಲ್ದಾರ್ ರವರು ವಶಕ್ಕೆ ಪಡೆದುಕೊಂಡಿದ್ದಾರೆ. 

ಗೆಜ್ಜೇನಹಳ್ಳಿ ಹಾಗೂ ಕಲ್ಲುಗಂಗೂರು ಗ್ರಾಮಗಳ ಸುತ್ತಮುತ್ತ ಕೆಲವರು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಸ್ಪೋಟಕಗಳನ್ನು ಸಿಡಿಸುತ್ತಿದ್ದರು. ಈ ಕುರಿತಂತೆ ಗ್ರಾಮಸ್ಥರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರು. ಇದರ ಆಧಾರದ ಮೇಲೆ ತಹಶೀಲ್ದಾರ್ ಬಿ.ಎನ್.ಗಿರೀಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. 

ಈ ಕುರಿತಂತೆ ಸೋಮವಾರ ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರು ದೂರವಾಣಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, 'ಗೆಜ್ಜೇನಹಳ್ಳಿ ಹಾಗೂ ಕಲ್ಲುಗಂಗೂರು ಸುತ್ತಮುತ್ತ ಅನುಮತಿಯಿಲ್ಲದೆ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತಂತೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News