ಪಾಕ್: ಮಸೂದ್ ಅಝರ್ ಸೋದರ ಸೇರಿದಂತೆ 44 ಉಗ್ರರ ಬಂಧನ

Update: 2019-03-05 15:24 GMT

ಇಸ್ಲಾಮಾಬಾದ್, ಮಾ. 5: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಜೈಶೆ ಮುಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಝರ್‌ನ ಸಹೋದರ ಅಬ್ದುಲ್ ರವೂಫ್ ಅಸ್ಘರ್ ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಿದ ಇತರ 43 ಮಂದಿಯನ್ನು ಪಾಕಿಸ್ತಾನ ಸರಕಾರ ಬಂಧಿಸಿದೆ ಎಂದು ಆ ದೇಶದ ಗೃಹ ಸಚಿವ ಶಹರ್ಯಾರ್ ಅಫ್ರಿದಿ ಹೇಳಿದ್ದಾರೆ.

ಅವರ ಬಂಧನಕ್ಕೆ ಆದೇಶವನ್ನು ಇಂದು ಹೊರಡಿಸಲಾಗಿತ್ತು.

ಆದೇಶ ಹೀಗೆ ಹೇಳುತ್ತದೆ: ‘‘ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿ)ಯನ್ನು ಅನುಷ್ಠಾನಗೊಳಿಸುವುದಕ್ಕಾಗಿ, ಮಾರ್ಚ್ 4ರಂದು ಗೃಹ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಎಲ್ಲ ರಾಜ್ಯ ಸರಕಾರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಎಲ್ಲ ನಿಷೇಧಿತ ಸಂಘಟನೆಗಳ ವಿರುದ್ಧದ ಕ್ರಮವನ್ನು ತ್ವರಿತಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗಾಗಿ, ಮುಫ್ತಿ ಅಬ್ದುಲ್ ರವೂಫ್ ಮತ್ತು ಹಾಮದ್ ಅಝರ್ ಸೇರಿದಂತೆ ಕಣ್ಗಾವಲಿನಲ್ಲಿರುವ ನಿಷೇಧಿತ ಸಂಘಟನೆಗಳ 44 ಸದಸ್ಯರನ್ನು ತನಿಖೆಗಾಗಿ ಮುನ್ನೆಚ್ಚರಿಕಾ ಬಂಧನಕ್ಕೆ ಒಳಪಡಿಸಲಾಯಿತು. ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ)ಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಕ್ರಮಗಳು ಮುಂದುವರಿಯಲಿವೆ’’.

ಬಂಧನ ಕಾರ್ಯಾಚರಣೆಯನ್ನು ಮಾರ್ಚ್ 4ರಂದು ಘೋಷಿಸಲಾಗಿದೆ ಹಾಗೂ ಎರಡು ವಾರಗಳ ಕಾಲ ಮುಂದುವರಿಯಲಿದೆ.

ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ವಿಮಾನಗಳು ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಈ ಕ್ರಮಕ್ಕೆ ಮುಂದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಬಂಧಿತ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಬಂಧಿತರನ್ನು ತನಿಖೆಗೊಳಪಡಿಸಲಾಗುವುದು ಹಾಗೂ ಅವರು ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸಿ ಮೊಕದ್ದಮೆ ಹೂಡಲಾಗುವುದು ಎಂದು ಅವರು ತಿಳಿಸಿದರು.

►ನಿಷೇಧಿತ ಸಂಘಟನೆಗಳ ಆಸ್ತಿ ಮುಟ್ಟುಗೋಲಿಗೆ ಪಾಕ್ ಆದೇಶ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಂತೆ, ಎಲ್ಲ ನಿಷೇಧಿತ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ದಿಗ್ಬಂಧನಗಳನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಪಾಕಿಸ್ತಾನ ಸರಕಾರ ಆದೇಶವೊಂದನ್ನು ಹೊರಡಿಸಿದೆ ಎಂದು ಪಾಕಿಸ್ತಾನದ ವಿದೇಶ ಕಚೇರಿ ತಿಳಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಕಾಯ್ದೆ, 1948ರ ವಿಧಿಗಳಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಮುಟ್ಟುಗೋಲು ಮತ್ತು ವಶ) ಆದೇಶ, 2019 ಹೊರಡಿಸಲಾಗಿದೆ.

ಆದೇಶದ ಬಗ್ಗೆ ವಿವರಣೆ ನೀಡಿದ ವಿದೇಶ ಕಚೇರಿ ವಕ್ತಾರ ಮುಹಮ್ಮದ್ ಫೈಝಲ್, ದೇಶದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ನಿಷೇಧಿತ ಸಂಘಟನೆಗಳ ನಿಯಂತ್ರಣವನ್ನು ಸರಕಾರ ತೆಗೆದುಕೊಂಡಿದೆ ಎನ್ನುವುದು ಈ ಆದೇಶದ ಅರ್ಥ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News