ಮಾ.9 ರಿಂದ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್

Update: 2019-03-05 16:43 GMT

ಬೆಂಗಳೂರು, ಮಾ.5: ಸಾಮಾನ್ಯ ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮಾ.9 ರಿಂದ ರಾಜ್ಯದಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಟೆ ಸಂಜೀವ್ ಕುಮಾರ್ ಹೇಳಿದ್ದಾರೆ.

ನಗರದ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನರಿಗೆ ಅತಿ ತ್ವರಿತವಾಗಿ ಹಾಗೂ ಯಾವುದೇ ಖರ್ಚಿಲ್ಲದೆ ನ್ಯಾಯ ದೊರಕಿಸಿಕೊಡುವುದು ಇದರ ಉದ್ದೇಶವಾಗಿದೆ. ಮಾ.9 ರಿಂದ ಆರಂಭಗೊಂಡು ಜುಲೈ, ಸೆಪ್ಟೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಎರಡನೇ ಶನಿವಾರಗಳಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯುತ್ತದೆ ಎಂದು ತಿಳಿಸಿದರು.

ಎಲ್ಲೆಲ್ಲಿ ನಡೆಯುತ್ತವೆ: ಲೋಕ ಅದಾಲತ್ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯ, ತಾಲೂಕು ನ್ಯಾಯಾಲಯ, ಹೈಕೋರ್ಟ್, ಬೆಂಗಳೂರಿನ ಸಿಟಿ ಸಿವಿನ್ ಕೋರ್ಟ್, ಮೆಯೋಹಾಲ್ ನ್ಯಾಯಾಲಯ ಹಾಗೂ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳಲ್ಲಿ ನಡೆಯುತ್ತವೆ.

ಯಾವ ಪ್ರಕಾರಗಳಿಗೆ ಪರಿಹಾರ: ಚೆಕ್ ಅಮಾನ್ಯದ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ವ್ಯಾಜ್ಯಪೂರ್ವ ಪ್ರಕರಣಗಳು ದಾಖಲಿಸಬಹುದು.

ಅಲ್ಲದೆ, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ತೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು(ಜಿಲ್ಲಾ ಮತ್ತು ಹೈಕೋರ್ಟ್‌ನಲ್ಲಿರುವುದು ಮಾತ್ರ), ಸಿವಿಲ್ ಪ್ರಕಣಗಳು(ಬಾಡಿಗೆ, ಅನುಭೋಗದ ಹಕ್ಕುಗಳು ನಿರ್ಬಂಧಾಜ್ಞೆ, ಮೊಕದ್ದಮೆಗಳು)ಗಳನ್ನು ದಾಖಲಿಸಬಹುದು ಎಂದು ಮಾಹಿತಿ ನೀಡಿದರು.

ಜನತಾ ನ್ಯಾಯಾಲಯದಲ್ಲಿ ನೇರವಾಗಿ ಅಥವಾ ವಕೀಲರ ಮುಖಾಂತರ ಪಾಲ್ಗೊಳ್ಳಬಹುದು. ಇಲ್ಲಿ ಎರಡೂ ಕಡೆಯವರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿರುವ ಶುಲ್ಕವನ್ನು ಮರು ಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ರಾಷ್ಟ್ರದ ಎಲ್ಲ ಕಡೆಗಳಲ್ಲಿ ನಡೆಯುತ್ತಿರುವ ಈ ಅದಾಲತ್‌ನಲ್ಲಿ ನೀಡುವ ನಿರ್ಣಯ ಅಂತಿಮವಾದುದಾಗಿರುತ್ತದೆ. ಇದನ್ನು ಮೀರಿ ಎಲ್ಲಿಯೂ ಮರು ದೂರು ನೀಡಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿರುವುದಿಲ್ಲ. ಈಗಾಗಲೇ ರಾಜ್ಯಾದ್ಯಂತ 57098 ನ್ಯಾಯಾಲಯದಲ್ಲಿ ಬಾಕಿಯಿರುವ ಹಾಗೂ 20296 ವ್ಯಾಜ್ಯಪೂರ್ವ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಜನವರಿ 2018 ರಿಂದ ಡಿಸೆಂಬರ್‌ವರೆಗೆ ಪ್ರತಿದಿನದ ಲೋಕ ಅದಾಲತ್‌ನಲ್ಲಿ 87,419 ನ್ಯಾಯಾಲಯದಲ್ಲಿ ಬಾಕಿಯಿದ್ದ ಹಾಗೂ 7,425 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ. ಅಲ್ಲದೆ, ಹಿಂದಿನ ಸಾಲಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 85,692 ನ್ಯಾಯಾಲಯದಲ್ಲಿ ಬಾಕಿಯಿದ್ದ ಹಾಗೂ 15,139 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ. ಜನವರಿ 2018 ರಿಂದ ಡಿಸೆಂಬರ್‌ವರೆಗೆ ಸಂತ್ರಸ್ಥ ಪರಿಹಾರ ಯೋಜನೆ ಅಡಿಯಲ್ಲಿ 397 ಸಂತ್ರಸ್ಥರಿಗೆ 8.3 ಕೋಟಿಗೂ ಅಧಿಕ ಹಣ ವಿತರಿಸಲಾಗಿದೆ.

-ಹಂಚಟೆ ಸಂಜೀವ್ ಕುಮಾರ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News