ಊಹಾಪೋಹಗಳೆಲ್ಲಾ ಮಾಧ್ಯಮಗಳ ಸೃಷ್ಟಿ: ಕುಮಾರಸ್ವಾಮಿ

Update: 2019-03-05 16:51 GMT

ಕೋಲಾರ,ಮಾ.5: ಮಂಡ್ಯ ಲೋಕಸಭಾ ಚುನಾವಣಾ ರಾಜಕೀಯದ ಬಗ್ಗೆ ಅಲ್ಲಿನ ಜನ ತಲೆಕೆಡಿಸಿಕೊಂಡಿಲ್ಲ, ಊಹಾಪೋಹಗಳು ಎಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. 

ಕೋಲಾರದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಎಂ.ವಿ.ಕೆ ಗೋಲ್ಡನ್ ಡೇರಿ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ  ನೆರವೇರಿಸಿದ ನಂತರ ಸುದ್ಧಿಗಾರರೊಂದಿಗೆ ಮತನಾಡಿದರು.

ಚುನಾವಣೆಯಲ್ಲಿ ಭಾಗವಹಿಸುವುದಕ್ಕೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯವಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ ಅವರು, ಚುನಾವಣೆ ಬಂದಂತೆ ಎಲ್ಲವೂ ಬೆಳಕಿಗೆ ಬರುತ್ತದೆ. ಆ ಬಗ್ಗೆ ನಾವು ತಲೆ ಕೆಡೆಸಿಕೊಂಡಿಲ್ಲ. ನೀವು ತಲೆ ಕೆಡಿಸಿಕೊಳ್ಳ ಬೇಡಿ ಎಂದರು.

ಇನ್ನು, ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧೆ ಕುರಿತಂತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣಾ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಇದು ಸಹಜ. ಬೆಂಬಲ ನೀಡುವುದು ಬಿಡುವುದು ಅವರವರಿಗೆ ಬಿಟ್ಟಿದ್ದು, ಚುನಾವಣೆ ಸಂದರ್ಭದಲ್ಲಿ ನಾವು ಅದನ್ನು ಸರಿ ಪಡಿಸಿಕೊಳ್ಳುತ್ತೇವೆ ಎಂದರು. 

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಕೆ.ಸಿ ವ್ಯಾಲಿ ನೀರಾವರಿ ಯೋಜನೆ ವಿರುದ್ಧ ಚುನಾವಣಾ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಈಗ ವರಸೆ ಬದಲಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ಯೋಜನೆ ಎರಡು ಹಂತದಲ್ಲಿ ಶುದ್ಧೀಕರಣವಾಗುತ್ತಿದ್ದು, ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸಲಾಗಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಕಾರ್ಯರೂಪಕ್ಕೆ ತರುತ್ತೇವೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದಾರದೊಂದು ಮೂಲೆಯಿಂದ ನೀರು ಹರಿಸಿಯೇ ತೀರುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News